Belagavi News:
ಬೆಂಗಳೂರು: ನಗರದ ದಕ್ಷಿಣ ವಲಯದ ಕತ್ರಿಗುಪ್ಪೆ ವಾರ್ಡ್ ನಲ್ಲಿ ಕಲುಷಿತ ಕಾವೇರಿ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಕ್ಕೂ ಹೆಚ್ಚು ಮನೆಗಳಿಗೆ ಸರಬರಾಜಾಗುತ್ತಿರುವ ನೀರು ಮಣ್ಣು ಮಿಶ್ರಿತವಾಗಿದ್ದು, ದುರ್ವಾಸನೆ ಬೀರುತ್ತಿರುವುದರಿಂದ ಆರೋಗ್ಯದ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ.
ಸ್ಥಳೀಯರ ಪ್ರಕಾರ, ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಪದೇ ಪದೇ ಮರುಕಳಿಸುತ್ತಿದ್ದು, ಶಾಶ್ವತ ಪರಿಹಾರ ಮಾತ್ರ ದೊರತಿಲ್ಲ. ಕುಡಿಯಲು ಮತ್ತು ದೈನಂದಿನ ಬಳಕೆಗೆ ಅವಲಂಬಿಸಿರುವ ಕಾವೇರಿ ನೀರೇ ಕಪ್ಪು ಬಣ್ಣಕ್ಕೆ ತಿರುಗಿ, ದುರ್ವಾಸನೆಯೊಂದಿಗೆ ಪೂರೈಕೆಯಾಗುತ್ತಿರುವುದರಿಂದ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಕಲುಷಿತ ನೀರಿನ ಪರಿಣಾಮವಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ಉಂಟಾಗಿದ್ದು, ಪಡಿಸಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನೀರಿನ ಗುಣಮಟ್ಟ ಪರಿಶೀಲಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ ಎಂದು ಆರೋಪಿಸಿದ್ದು, ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ತಕ್ಷಣ ಖಚಿತಪಡಿಸುವಂತೆ ಬೆಂಗಳೂರು ಜಲಮಂಡಳಿ (BWSSB) ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕುಡಿಯಲು ಮಾತ್ರವಲ್ಲ, ದೈನಂದಿನ ಗೃಹಬಳಕೆಗೂ ಈ ನೀರನ್ನು ಬಳಸಲು ಭಯವಾಗುತ್ತಿದೆ ಎಂದು ಕತ್ರಿಗುಪ್ಪೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಕಾವೇರಿ ನೀರಿನ ಪೈಪ್ ಲೈನ್ ಗೆ ಕೊಳಚೆ ನೀರು ಸೇರಿಕೊಳ್ಳುತ್ತಿರುವುದೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಿಂದಿ ನೀರಿನಲ್ಲಿ ಪೆಟ್ರೋಲ್ ಹಾಗೂ ಎಣ್ಣೆ ಮಿಶ್ರಣವಾಗುತ್ತಿದ್ದರೆ, ಇದೀಗ ಸ್ಯಾನಿಟರಿ ಲೈನ್ ನ ಕೊಳಚೆ ನೀರೇ ಕಾವೇರಿ ನೀರಿಗೆ ಸೇರಿ ಪೂರೈಕೆಯಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆ ಬೀರುತ್ತಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಈ ಕುರಿತು ಬೆಂಗಳೂರು ಜಲ ಮಂಡಳಿ (BWSSB) ಅಧಿಕಾರಿಗಳಿಗೆ ಹಲವು ಬಾರಿ ದೂರು ಹಾಗೂ ಮನವಿ ಸಲ್ಲಿಸಿದ್ದರು ಶಾಶ್ವತ ಪರಿಹಾರ ದೊರಕಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಆರೋಗ್ಯದ ಬಗ್ಗೆ ಕುಟುಂಬಗಳು ತೀವ್ರ ಚಿಂತೆಯಲ್ಲಿದ್ದು, ಕಲುಷಿತ ನೀರಿನ ಸಮಸ್ಯೆಯನ್ನು ತಕ್ಷಣ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.