Belagavi News :
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ (85) ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜುಲೈ 18ರಂದು ಕೊನೆ ಉಸಿರೆಳೆದಿದ್ದಾರೆ.
ಕೆಲ ವರ್ಷಗಳಿಂದ ಉಸಿರಾಟ ಸಂಬಂಧಿಸಿದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಚೆನ್ನಮ್ಮ ಅವರ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರು ಆಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 15 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಿ, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ತಜ್ಞ ವೈದ್ಯ ಡಾ. ಸತ್ಯನಾರಾಯಣ ಅವರ ನೇತೃತ್ವದಲ್ಲಿ ಚೆನ್ನಮ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಪ್ರಯತ್ನಗಳ ನಡುವೆಯೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ರಾಜಕೀಯ ಜೀವನದಲ್ಲಿ ಸದಾ ಸಕ್ರಿಯರಾಗಿದ್ದ ಹೆಚ್ ಡಿ ದೇವೇಗೌಡ ಅವರ ಕುಟುಂಬಕ್ಕೆ ಚೆನ್ನಮ್ಮ ಅವರು ಪ್ರಮುಖ ಬೆಂಬಲವಾಗಿದ್ದರು. ದೇವೇಗೌಡರ ಸಂಸಾರದ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದ ಅವರು ಸರಳತೆ ಮತ್ತು ಕುಟುಂಬದ ಕಾಳಜಿಯಿಂದ ಗಮನ ಸೆಳೆದಿದ್ದರು.
ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜೆಡಿಎಸ್ ನಾಯಕರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಕುಟುಂಬದವರು ಮಾಹಿತಿ ನೀಡಲಿದ್ದಾರೆ.
Chennamma deve Gowda death - ದೇವೇಗೌಡರ ಬೆನ್ನೆಲುಬಾಗಿದ್ದ ಚೆನ್ನಮ್ಮ; ಅಂತಿಮ ದರ್ಶನಕ್ಕೆ ಗಣ್ಯರ ಆಗಮನ :
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ನಿಧನದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆ ಬಳಿ ಗಣ್ಯರು, ಸಂಬಂಧಿಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ತಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ದೇವೇಗೌಡರ ರಾಜಕೀಯ ಜೀವನದ ಬೆನ್ನೆಲುಬಾಗಿದ್ದ ಚೆನ್ನಮ್ಮ :
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರು 1954ರ ಮೇ 25 ರಂದು ಹೆಚ್ ಡಿ ದೇವೇಗೌಡ ಅವರೊಂದಿಗೆ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೇವೇಗೌಡರ ರಾಜಕೀಯ ಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿದ್ದ ಅವರು ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು.
ಈ ದಂಪತಿಗೆ ಹೆಚ್ . ಡಿ. ರೇವಣ್ಣ , ಎಚ್ ಡಿ ಬಾಲಕೃಷ್ಣ, ಎಚ್ ಡಿ ರಮೇಶ್ ಗೌಡ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ನಾಲ್ವರು ಪುತ್ರರು ಹಾಗೂ ಶೈಲಜಾ, ಅನಸೂಯ ಎಂಬ ಇಬ್ಬರು ಪುತ್ರಿಯರು ಇದ್ದಾರೆ.
ರಾಜಕೀಯ ಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದ ದೇವೇಗೌಡ ಅವರಿಗೆ ಕುಟುಂಬದ ಹೊರೆ ಬೀಳದಂತೆ ನೋಡಿಕೊಂಡಿದ್ದ ಚನ್ನಮ್ಮ ಅವರು ಗಟ್ಟಿಗಿತ್ತಿ ಹಾಗೂ ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು. ಆರು ಮಕ್ಕಳ ಶಿಕ್ಷಣ ಮತ್ತು ಪೋಷಣೆಯ ಜವಾಬ್ದಾರಿಯನ್ನು ಹೊತ್ತು ಕುಟುಂಬವನ್ನು ಮುನ್ನಡೆಸುತ್ತಿದ್ದರು.
2001ರಲ್ಲಿ ಚೆನ್ನಮ್ಮ ಅವರ ಮೇಲೆ ನಡೆದಿತ್ತು ಆ್ಯಸಿಡ್ ದಾಳಿ :
2001ರ ಫೆಬ್ರವರಿಯಲ್ಲಿ ಹರದನಹಳ್ಳಿಯ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಚೆನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು.
ಎಚ್ ಡಿ ದೇವೇಗೌಡ ಮತ್ತು ಕಾಳಮ್ಮ ದಂಪತಿಯ ಪುತ್ರಿಯಾಗಿದ್ದ ಚೆನ್ನಮ್ಮ , ಆ ಕಾಲದಲ್ಲೇ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದಿದ್ದರು. ಮನೆಯ ಹಿರಿಯ ಮಗಳಾಗಿ ತಮ್ಮ ನಾಲ್ವರು ತಮ್ಮಂದಿರು ಹಾಗೂ ಮೂವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದರು.
ಚೆನ್ನಮ್ಮ ದೇವೇಗೌಡರ ನಿಧನದಿಂದ ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.