Belagavi News:
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ದೇಶದ ಭದ್ರತೆ, ಖಾಸಗಿ ಬಾಹ್ಯಾಕಾಶ ವಲಯದ ಬೆಳವಣಿಗೆ ಹಾಗೂ ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಯನ್ನು ಪ್ರಧಾನಿ ಶ್ಲಾಘಿಸಿದರು. ವಿಶ್ವದ ಹಲವು ಭಾಗಗಳಲ್ಲಿ, ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿ ಮುಂದುವರಿದಿದ್ದರೂ ಭಾರತದ ಆರ್ಥಿಕತೆ ಬಲಿಷ್ಠವಾಗಿ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ದೇಶದ ಅಭಿವೃದ್ಧಿ ಪಯಣದಲ್ಲಿ ಯುವಶಕ್ತಿ ಮತ್ತು ನವೋದ್ಯಮಗಳ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದ ಸಾಮರ್ಥ್ಯಗಳು ಮತ್ತು ಸಾಧನೆಗಳ ಬಗ್ಗೆ ವಿಶ್ವದ ಗಮನ ಸೆಳೆದರು.
ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳು ಎದುರಾಗಿದ್ದರೂ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷದಿಂದ ಆರ್ಥಿಕ ಅನಿಶ್ಚಿತತೆ ಉಂಟಾಗಿದ್ದರೂ, ಭಾರತವು ಶೇಕಡಾ 7.7ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ಆರ್ಥಿಕ ಶಕ್ತಿಯನ್ನು ಶ್ಲಾಘಿಸಿದ ಅವರು, ದೇಶದ ಪ್ರಗತಿಗೆ ಪ್ರತಿಯೊಬ್ಬ ಭಾರತೀಯನ ಕೊಡುಗೆಯೂ ಮಹತ್ವದಾಗಿದೆ ಎಂದು ತಿಳಿಸಿದರು. ಇದೇ ವೇಳೆ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತೀಯ ಖಾಸಗಿ ಬಾಹ್ಯಾಕಾಶ ಸಂಸ್ಥೆ ' ಸ್ಕೈರೂಟ್ ' ಇತ್ತೀಚೆಗೆ ಸಾಧಿಸಿದ ರಾಕೆಟ್ ಉಡಾವಣೆಯ ಐತಿಹಾಸಿಕ ಯಶಸ್ಸನ್ನು ಸ್ಮರಿಸಿದರು.
ಕಳೆದ ವರ್ಷ ಭಾರತೀಯ ನಾಗರಿಕಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಸಾಧನೆಯನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಇದೀಗ ಭಾರತದ ಯುವಕರು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಖಾಸಗಿ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ಭಾರತದ ಯುವಕರ ಸಾಮರ್ಥ್ಯ ಮತ್ತು ಕನಸುಗಳು ಬಾಹ್ಯಾಕಾಶದಷ್ಟೇ ಅಪಾರವಾಗಿವೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಸಂಸತ್ತಿನ ಮುಂಗಾರು ಅಧಿವೇಶನದ ಕುರಿತು ಮಾತನಾಡಿದ ಅವರು, ಅಧಿವೇಶನವೂ ರಚನಾತ್ಮಕ ಚರ್ಚೆಗಳಿಗೆ ವೇದಿಕೆಯಾಗಲಿ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳು ಕೈಗೊಳ್ಳುವ ಮೂಲಕ ಅತ್ಯಂತ ಫಲಪ್ರದವಾಗಿ ನಡೆಯಲಿ ಎಂದು ಆಶಿಸಿದರು.