Belagavi News:
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ಬಹುನಿರೀಕ್ಷಿತ ಸಂಪುಟ ವಿಸ್ತರಣೆಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಸಚಿವ ಸ್ಥಾನಾಕಾಂಕ್ಷಿ ಶಾಸಕರು ಹೈಕಮಾಂಡ್ ಭೇಟಿಗಾಗಿ ನವದೆಹಲಿಯತ್ತ ಮುಖ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ನಾಯಕರು ಲಾಬಿ ಆರಂಭಿಸಿದ್ದು, ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ.
ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯಲ್ಲಿ ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಸುಧಾಮ್ ದಾಸ್, ಮಂಜುನಾಥ್ ಭಂಡಾರಿ, ಶರಣಗೌಡ ಬಯ್ಯಾಪುರ, ವಿಜಯಾನಂದ ಕಾಶಪ್ಪನವರ್, ಬ್ಯಾಡಗಿ ಶಿವಣ್ಣನವರ್, ಗುಬ್ಬಿ ವಾಸು, ಪುಟ್ಟಣ್ಣ, ಎಂ.ಆರ್. ಸೀತಾರಾಮ್ ಹಾಗೂ ಬಿ.ಆರ್. ಪಾಟೀಲ್ ಸೇರಿದಂತೆ ಹಲವು ಶಾಸಕರ ಹೆಸರುಗಳು ಕೇಳಿಬರುತ್ತಿವೆ. ಇವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡಿ ತಮ್ಮ ಪರವಾಗಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಯ ಕುರಿತು ಪಕ್ಷದ ವರಿಷ್ಠರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಚಿತ್ರದುರ್ಗ ಪ್ರವಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಇಂದಿನ ದೆಹಲಿ ಪ್ರವಾಸ ರದ್ದಾಗಿದ್ದು, ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಈ ಭೇಟಿಯಲ್ಲಿ ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಹಾಗೂ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ ಕುರಿತ ಹೈ ಕಮಾಂಡ್ ನ ನಿರ್ಧಾರ ಏನಾಗಲಿದೆ ಎಂಬುದರ ಮೇಲೆ ಕಾಂಗ್ರೆಸ್ನ ಹಲವು ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದ್ದು, ರಾಜ್ಯ ರಾಜಕೀಯದಲ್ಲಿ ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.