"ಕಾಂಗ್ರೆಸ್ ಪಕ್ಷ ನಡೆಸಿದ ಪಾದಯಾತ್ರೆಗಳು ಸಂಪೂರ್ಣವಾಗಿ ಜನಪರ ಹಾಗೂ ವಿಷಯಾಧಾರಿತವಾಗಿದ್ದು, ಅದಕ್ಕೇ ಅಭೂತಪೂರ್ವ ಜನಬೆಂಬಲ ಸಿಕ್ಕಿತ್ತು. ಆದರೆ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಇಶ್ಯೂಲೆಸ್ ಆಗಿದ್ದು, ರಾಜಕೀಯ ಲಾಭಕ್ಕಾಗಿ ಮಾತ್ರ ನಡೆಯುತ್ತಿದೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು."ಲಿಸ್-ಸಬ್ ಲಿಸ್ ಎಂದು ಸಿಎಂ ಬಗ್ಗೆ ಮಾತನಾಡುವ ಬಿಜೆಪಿಯವರು ತಮ್ಮದೇ ಪಕ್ಷವನ್ನು ಮಾರಾಟಕ್ಕೆ ತಂದಿದ್ದಾರೆ. ಜೆಡಿಎಸ್ ಪಕ್ಷವನ್ನು ಅಕ್ರಮ-ಸಕ್ರಮದ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ. ಮಂಡ್ಯ ಸ್ಥಳೀಯ ಚುನಾವಣೆಗೆ ಕಾಲು ಹಿಡಿದು ಒಪ್ಪಂದಕ್ಕೆ ಮುಂದಾಗಿದ್ದಾರೆ" ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಮೇಕೆದಾಟು, ನಮ್ಮ ನಡೆ ಕೃಷ್ಣ ಕಡೆ, ಯುಕೆಪಿ, ಕಾವೇರಿ ಹಾಗೂ ರಿಪಬ್ಲಿಕ್ ಬಳ್ಳಾರಿ ಸೇರಿದಂತೆ ಪ್ರತಿಯೊಂದು ಪಾದಯಾತ್ರೆಯನ್ನೂ ಜನರ ಸಮಸ್ಯೆಗಳನ್ನೇ ಆಧಾರವಾಗಿ ಮಾಡಿಕೊಂಡು ನಡೆಸಿದ್ದೇವೆ. ಹೀಗಾಗಿ ಜನರ ಬೆಂಬಲ ಸಿಕ್ಕಿತು. ಆದರೆ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡಿದರೆ ನಾಲ್ಕು ಜನ ಮಾತ್ರ ಜೊತೆಯಾಗುತ್ತಾರೆ. ಅಂತಹ ಪಾದಯಾತ್ರೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದಾಗಬಹುದು ಅಷ್ಟೇ" ಎಂದು ಟೀಕಿಸಿದರು.ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸರ್ಕಾರ ಮ್ಯಾಚಿಂಗ್ ಗ್ರಾಂಟ್ ನೀಡಬೇಕೆಂದು ಆಗ್ರಹಿಸಿದ ಅವರು, "ಈ ಪ್ರದೇಶ ಅತ್ಯಂತ ಹಿಂದುಳಿದ ಪಟ್ಟಿಗೆ ಸೇರಿದ್ದು, ಅದಕ್ಕಾಗಿಯೇ 371(ಜೆ) ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನ ನೀಡಲಾಗಿದೆ. ಅಭಿವೃದ್ಧಿಯ ವೇಗ ಹೆಚ್ಚಬೇಕಾದರೆ ಹೆಚ್ಚಿನ ಆರ್ಥಿಕ ಸಹಾಯ ಅಗತ್ಯ. ವಿದರ್ಭ ಸೇರಿದಂತೆ ಬೇರೆ ಪ್ರದೇಶಗಳಿಗೆ ನೀಡುವಂತೆ ನಮಗೂ ಮ್ಯಾಚಿಂಗ್ ಗ್ರಾಂಟ್ ನೀಡಬೇಕು. ಈ ಕುರಿತು ಮುಖ್ಯಮಂತ್ರಿ ಎರಡು-ಮೂರು ಬಾರಿ ಪ್ರಧಾನಿಗೆ ಪತ್ರ ಬರೆದರೂ ಕೇಂದ್ರ ಸರ್ಕಾರ ಮೌನವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.ಜಿಎಸ್‌ಟಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ನಾವು ಜಿಎಸ್‌ಟಿಯಲ್ಲಿ ನಂಬರ್ ಒನ್, ನಮ್ಮ ತೆರಿಗೆಯ ಪಾಲು ನಮಗೆ ಕೊಟ್ಟರೆ ಸಾಕು. 11 ವರ್ಷಗಳ ಮೋದಿ ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯದಿಂದ ರೂಪಾಯಿ ಮೌಲ್ಯ ಕುಸಿದಿದೆ, ನಿರುದ್ಯೋಗ ಹೆಚ್ಚಾಗಿದೆ, ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಿದೆ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ಆಯ್ಕೆಯಾಗಿದ್ದು, ಕನ್ನಡಿಗರ ಋಣ ತೀರಿಸಲು ಇದು ಅವಕಾಶ. ಅವರು ಸ್ಪಂದಿಸಬೇಕು. ಬಿಜೆಪಿಯವರೂ ಈ ಭಾಗದ ಜನತೆಗೆ ಅನುಕೂಲವಾಗುವಂತೆ ಧ್ವನಿ ಎತ್ತಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಓದಿರಿ:
" ಬೇಡ್ತಿ - ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧ ಶಿರಸಿಯಲ್ಲಿ ಭಾರೀ ಪ್ರತಿರೋಧ "