ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಗೆ ಅನುಗುಣವಾಗಿ ದಿನಾಂಕ ಹಾಳೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ಹೊಸ ದಿನಾಂಕಗಳು ವಿದ್ಯಾರ್ಥಿಗಳ ಪ್ರವೇಶ ಪತ್ರಗಳಲ್ಲಿಯೂ ಇರಲಿವೆ ಎಂದು ಸಿಬಿಎಸ್ಇ ತಿಳಿಸಿದೆ.
ಪರೀಕ್ಷೆಯ ದಿನಾಂಕದ ಕುರಿತು ಯಾವುದೇ ಗೊಂದಲ ಅಥವಾ ವದಂತಿಗಳನ್ನು ತಪ್ಪಿಸಲು, ಈ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಕ್ಷಣ ತಿಳಿಸುವಂತೆ ಮಂಡಳಿಯು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದೆ.
ಆಡಳಿತಾತ್ಮಕ ಕಾರಣಗಳಿಂದಾಗಿ ಮಂಡಳಿಯು ಈ ಪರೀಕ್ಷಾ ದಿನಾಂಕಗಳನ್ನು ಮುಂದೂಡಿದೆ. ಈ ಸಂಬಂಧ ಸಿಬಿಎಸ್ಇ ಎಲ್ಲಾ ಸಂಯೋಜಿತ ಶಾಲೆಗಳಿಗೆ ಅಧಿಕೃತ ಸೂಚನೆ ನೀಡಿದೆ.
ಸಿಬಿಎಸ್ಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಮೊದಲು 10ನೇ ತರಗತಿ ಪರೀಕ್ಷೆಯನ್ನು 2026ರ ಮಾರ್ಚ್ 3 ರಂದು ಪರೀಕ್ಷೆ ನಿಗದಿ ಮಾಡಲಾಗಿತ್ತು, ಇದೀಗ ಈ ಪರೀಕ್ಷೆಯನ್ನು ಮಾರ್ಚ್ 11ಕ್ಕೆ ಮುಂದೂಡಲಾಗಿದೆ.
ಹಾಗೇ ಮಾರ್ಚ್ 3ರಂದು ನಿಗದಿಯಾಗಿದ್ದ 12ನೇ ತರಗತಿ ಪರೀಕ್ಷೆ ಏಪ್ರಿಲ್ 10ಕ್ಕೆ ಮರುನಿಗದಿ ಮಾಡಲಾಗಿದೆ.
ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಡಾ. ಸಂಯಮ್ ಭಾರದ್ವಾಜ್ ಮಾತನಾಡಿ, ಪರೀಕ್ಷೆಗಳನ್ನು ಸುಗಮ ಮತ್ತು ಪಾರದರ್ಶಕವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ಶಾಲೆಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ನಿರ್ಧಾರಕ್ಕೆ ಸಹಕರಿಸುತ್ತಾರೆ ಎಂದು ಮಂಡಳಿ ಆಶಿಸುತ್ತದೆ. ಈ ಬದಲಾವಣೆಯು ವಿದ್ಯಾರ್ಥಿಗಳಿಗೆ ತಯಾರಿ ನಡೆಸಲು ಹೆಚ್ಚುವರಿ ಸಮಯವನ್ನು ನೀಡುತ್ತದೆ, ಒತ್ತಡವಿಲ್ಲದೆ ಉತ್ತಮವಾಗಿ ತಯಾರಿ ನಡೆಸಲು ಅನುವು ಮಾಡಿಕೊಡುತ್ತದೆ ಎಂದರು.
ಈ ಬಾರಿ ಸಿಬಿಎಸ್ಸಿಯ 10 ಮತ್ತು 12ನೇ ತರಗತಿ ಪರೀಕ್ಷೆ ಹಾಜರಾತಿಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಅದರ ಅನುಸಾರ ಪ್ರಮುಖ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಶೇ. 75ರಷ್ಟು ಹಾಜರಾತಿ ಕಡ್ಡಾಯವಾಗಿದೆ. ಗಂಭೀರ ವೈದ್ಯಕೀಯ ಪರಿಸ್ಥಿತಿ, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮ ಅಥವಾ ತುರ್ತು ಪರಿಸ್ಥಿತಿಗಳಂತಹ ಕೆಲವು ಅಸಾಧಾರಣ ಪರಿಸ್ಥಿತಿ ಹಿನ್ನೆಲೆ ಶೇ. 25ರಷ್ಟು ಹಾಜರಾತಿಯ ವಿನಾಯಿತಿಯನ್ನು ಸಿಬಿಎಸ್ಸಿ ನೀಡಿದೆ.