ಶಿವಮೊಗ್ಗ: ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯುವ ಹಾಗೂ ಮುಚ್ಚುವ ಹಂತದಲ್ಲಿರುವ ಪ್ರಸ್ತುತ ಕಾಲದಲ್ಲಿ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹಳಿಯೂರು ಬಡಾವಣೆಯ ಹಳಿಯೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈಗ ಶತಮಾನೋತ್ಸವ ಆಚರಣೆಯಲ್ಲಿದೆ.
ರಾಮಸ್ವಾಮಿ ಅವರ ಮನೆಯಿಂದ ಶಾಲೆ ಹಾಲಿ ಶಾಲೆಗೆ ಶಿಫ್ಟ್ ಆಗುತ್ತದೆ. ಇಲ್ಲಿಗೆ ಬಂದಾಗ ಹಾಲಿ ಜಾಗ ಪೋಸ್ಟ್ ಆಫೀಸ್ ಆಗಿತ್ತು. ನಂತರ 1-4ನೇ ತರಗತಿ ನಡೆಯುತಿತ್ತು. ಇದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಮುಂದುವರೆಯಿತು. ಇಲ್ಲಿ ಗಂಡು ಮಕ್ಕಳಿಗೂ ಶಿಕ್ಷಣ ನೀಡಲು ಪ್ರಾರಂಭಿಸಲಾಯಿತು. ಶಾಲೆಯಲ್ಲಿ ಇದೀಗ 1ರಿಂದ 6ನೇ ತರಗತಿಗೆ ಒಟ್ಟು 30 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಖಾಯಂ ಶಿಕ್ಷಕರು, ಓರ್ವ ಶಿಕ್ಷಕಿ ನಿಯೋಜನೆಗೊಂಡಿದ್ದಾರೆ. ಇಬ್ಬರು ಅಡುಗೆ ಸಹಾಯಕರಿದ್ದಾರೆ. ಶಾಲೆಗೆ ಬೇಕಾದ ಪೀಠೋಪಕರಣ ಸೇರಿದಂತೆ ಇತರೆ ಆಟದ ಸಾಮಗ್ರಿ ಹಾಗು ಅಡುಗೆ ಮನೆಯನ್ನು ಹಳೇ ವಿದ್ಯಾರ್ಥಿಗಳು ನಿರ್ಮಿಸಿಕೊಟ್ಟಿದ್ದಾರೆ.
ದಾಖಲೆಗಳ ಪ್ರಕಾರ, ಹಳಿಯೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1908ರಲ್ಲಿ ಪ್ರಾರಂಭವಾಗಿದೆ. ಆದರೆ ಕೆಲವು ಸ್ಥಳೀಯರು ಹೇಳುವ ಪ್ರಕಾರ, ಅದಕ್ಕಿಂತಲೂ ಹಿಂದೆಯೇ ಶಾಲೆ ಶುರುವಾಗಿತ್ತು. ಹಳೇ ವಿದ್ಯಾರ್ಥಿಗಳು, ಸ್ಥಳೀಯ ಮುಖಂಡರ ನೆರವಿನಿಂದ ಶಾಲೆ ಈಗ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.
ಶಾಲೆ ಶತಮಾನೋತ್ಸವ ಮುಗಿಸಿ ಮುನ್ನುಗ್ಗುತ್ತಿರುವುದನ್ನು ಗುರುತಿಸಿದ ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿ, ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಇದಕ್ಕೆ ಎಸ್ಡಿಎಂಸಿ ಸಮಿತಿ ಸಾಥ್ ನೀಡಿದೆ.
1908ರಲ್ಲಿ ಇತಿಹಾಸ ಪ್ರಸಿದ್ದ ಹುಚ್ಚರಾಯ ದೇವಾಲಯದ ಮುಂಭಾಗದ ದೇವಾಲಯದ ಅರ್ಚಕ ರಾಮಸ್ವಾಮಿ ಅವರ ಮನೆಯಲ್ಲಿ ಶಾಲೆ ಪ್ರಾರಂಭವಾಗಿತ್ತು. ಇದಕ್ಕೆ ಮೊದಲು ಆರ್ಯ ಬಾಲಿಕ ಪಾಠ ಶಾಲೆ ಎಂದು ಕರೆಯಲಾಗುತ್ತಿತ್ತು. ಇದು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಿಕಾರಿಪುರ ತಾಲೂಕಿನಲ್ಲಿಯೇ ಪ್ರಾರಂಭವಾದ ಮೊಟ್ಟ ಮೊದಲ ಶಾಲೆ ಎಂಬುದು ವಿಶೇಷ.
ಹಳಿಯೂರು ಹಾಗೂ ಶಿಕಾರಿಪುರ ಪಟ್ಟಣದ ಮುಖಂಡರು ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಜನವರಿ 11ರಂದು ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳೊಂದಿಗೆ ಹಳೇ ವಿದ್ಯಾರ್ಥಿಗಳೂ ಸಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇದಕ್ಕಾಗಿ ಶಾಲೆಯ ಮಕ್ಕಳಿಗೆ ವಿಶೇಷವಾದ ಬಟ್ಟೆ ನೀಡಲಾಗಿದೆ. ಶಾಲೆಗೆ ಬೇಕಾದ ಸೌಕರ್ಯವನ್ನು ಹಳೇ ವಿದ್ಯಾರ್ಥಿಗಳು ನೀಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜನ ಶಿಕ್ಷಣ ಸಂಸ್ಥೆಯ ಅರುಣಾ ದೇವಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರುಗಳು ಭಾಗಿಯಾಗಲಿದ್ದಾರೆ. ಶಿಕ್ಷಕಿ ಲಕ್ಷ್ಮೀ ಸುಣಗಾರ್ ಮಾತನಾಡಿ, ಇದು ಸ್ವಾತಂತ್ರಪೂರ್ವದಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಪ್ರಾರಂಭವಾದ ಶಾಲೆಯಾಗಿತ್ತು. ಮೂಲಸೌಕರ್ಯ ಇರಲಿಲ್ಲ. ದಾನಿಗಳ ಸಹಾಯದಿಂದ ಮೂಲಭೂತ ಸೌಕರ್ಯ ನೀಡಿದ್ದೇವೆ. ಈಗ ನಮ್ಮ ಶಾಲೆ ನಮ್ಮ ಹೆಮ್ಮೆ ಎಂದು ಶತಮಾನೋತ್ಸವ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಇದಕ್ಕೆಲ್ಲಾ ಹಳೇ ವಿದ್ಯಾರ್ಥಿಗಳ ಸಹಕಾರ ತುಂಬಾ ಇದೆ. ಮುಂದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಆಂಗ್ಲ ಮಾಧ್ಯಮ ತೆರೆಯಲು ಅನುಮತಿ ಸಿಕ್ಕಿದೆ. ಶಾಲೆ ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಖುಷಿ ಹಂಚಿಕೊಂಡರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ವಸಂತ ಗೌಡ ಮಾತನಾಡಿ, ಶಾಲೆಯು ಮೊದಲು ಒಂದು ಹಂಚಿನ ಮನೆಯಲ್ಲಿತ್ತು. 1 ರಿಂದ 4ನೇ ತರಗತಿ ನಡೆಯುತ್ತಿತ್ತು. ನಂತರ ಯಡಿಯೂರಪ್ಪ ಅನುದಾನದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಿಕೊಟ್ಟರು. ಒಂದು ಹಂಚಿನ ಕಟ್ಟಡ ಇದೆ. ಶಾಲೆಗೆ ಇನ್ನೂ ಎರಡು ಕೊಠಡಿಗಳ ಅವಶ್ಯಕತೆ ಇದೆ. ಉತ್ತಮವಾದ ಶಿಕ್ಷಣ ನೀಡಲಾಗುತ್ತಿದೆ. ಇದೇ ಶಾಲೆಗೆ ಇಂಗ್ಲಿಷ್ ಮಾಧ್ಯಮವನ್ನು ಮಂಜೂರು ಮಾಡಿಸಬೇಕಿದೆ. ಇದಕ್ಕಾಗಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಶಾಲೆಯ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ. ಈ ಶಾಲೆಯಲ್ಲಿ ಓದಿದವರು ಅನೇಕರು ಶಿಕ್ಷಕರಾಗಿದ್ದಾರೆ. ಯಡಿಯೂರಪ್ಪ ಅವರ ಮೂವರು ಹೆಣ್ಣು ಮಕ್ಕಳಾದ ಅರುಣಾದೇವಿ, ಉಮಾದೇವಿ ಹಾಗೂ ಪದ್ಮಾದೇವಿ ಅವರು ಇದೇ ಶಾಲೆಯಲ್ಲಿ ಓದಿದವರು. ಇವರುಗಳೆಲ್ಲಾ ಉತ್ತಮವಾದ ಹುದ್ದೆಯಲ್ಲಿದ್ದಾರೆ. ಇದು ಹೆಣ್ಣು ಮಕ್ಕಳ ಶಾಲೆಯಾಗಿತ್ತು. 25 ವರ್ಷಗಳ ಹಿಂದೆ ಗಂಡು ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಪ್ರಾರಂಭಿಸಲಾಯಿತು. ಇದು ನಮ್ಮ ಶಿಕಾರಿಪುರದ ಪುರಾತನ ಶಾಲೆಯಾಗಿದೆ ಎಂದರು. ಶಿಕ್ಷಕಿ ಗಾಯಿತ್ರಿದೇವಿ ಮಾತನಾಡಿ, ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಯಡಿಯೂರಪ್ಪ ಅವರ ಮಗಳು ಅರುಣಾದೇವಿ ಜನ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಕವಿತಾ ಎಂಬವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದಾರೆ. ಅನೇಕರು ಶಿಕ್ಷಕರಾಗಿದ್ದಾರೆ. ಕಾಶಿಬಾಯಿ ಎಂಬವರು ಆಕಾಶವಾಣಿ ಕಲಾವಿದೆಯಾಗಿದ್ದಾರೆ. ಕಾರ್ಯಕ್ರಮಕ್ಕೆ ಹಳೇ ವಿದ್ಯಾರ್ಥಿಗಳ ಕೊಡುಗೆ ಇದೆ. ಹಳೇ ವಿದ್ಯಾರ್ಥಿಗಳ ಗುರುಭಕ್ತಿ ನಮಗೆ ಸಂತೋಷ ತಂದಿದೆ ಎಂದರು. ಹಳೇ ವಿದ್ಯಾರ್ಥಿ ರಶ್ಮಿ ದೀಕ್ಷಿತ್ ಮಾತನಾಡಿ, ನಮಗೆ ವಿದ್ಯೆ ಕೊಟ್ಟ ಗುರುಗಳು ಹಾಗೂ ಶಾಲೆಯನ್ನು ಯಾರೂ ಮರೆಯಬಾರದು. ನಾವು ಓದಿದಾಗ 1 ರಿಂದ 6ನೇ ತರಗತಿ ತನಕ ಇತ್ತು. ಶಿಕಾರಿಪುರ ಹಾಗೂ ಶಾಲೆ ನನಗೆ ಎರಡೂ ತಾಯಿಯ ಸಮಾನ. ಶಾಲೆಯ ಬಗ್ಗೆ ನೆನಪಿಸಿಕೊಂಡರೆ ಕಣ್ಣಲ್ಲಿ ಖುಷಿಯಿಂದ ನೀರು ಬರುತ್ತದೆ. ನಮಗೆ ಇಲ್ಲಿ ಹಿಂದೆ ನೀಡುತ್ತಿದ್ದ ಗೋಧಿ ಉಪ್ಪಿಟ್ಟು ನೆನಪಿಸಿಕೊಂಡ್ರೆ ಖುಷಿ ಆಗುತ್ತದೆ. ಸರ್ಕಾರಿ ಶಾಲೆಗಳು ಈಗ ಮುಚ್ಚುವ ಹಂತಕ್ಕೆ ತಲುಪಿವೆ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನಡೆಸುತ್ತಿರುವುದು ತುಂಬ ಸಂತೋಷ ತಂದಿದೆ. ನಾವೆಲ್ಲಾ ಶಾಲೆಯ ಅಭಿವೃದ್ದಿಗೆ ಸಹಾಯ ಮಾಡುತ್ತೇವೆ ಎಂದರು.
ಇನ್ನಷ್ಟು ಓದಿರಿ:
ಆಹಾರ ಶ್ವಾಸಕೋಶದಲ್ಲಿ ಸಿಕ್ಕಿದರೆ ನೀರು ಕುಡಿಯುವುದು ಹಾನಿಕಾರಕ : ಎಚ್ಚರಿಕೆ