ಉಜ್ಬೇಕಿಸ್ತಾನ್ನಲ್ಲಿ ನಡೆಯುತ್ತಿರುವ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಶಿಪ್-2025ನಲ್ಲಿ ಕಪ್ಪು ಕಾಯಿಗಳೊಂದಿಗೆ ಆಟವಾಡುತ್ತಾ, ಆಟದ 70ನೇ ನಡೆಯಲ್ಲಿ ಗುಕೇಶ್ ತೀವ್ರ ಸಮಯದ ಒತ್ತಡವನ್ನು ಎದುರಿಸಿದರು. ಅವರಿಗೆ ಕೇವಲ 8 ಸೆಕೆಂಡುಗಳು ಉಳಿದಿದ್ದವು. ಈ ಹಂತದಲ್ಲಿ, ಅವರ ಎದುರಾಳಿ ಸ್ಲೋಕಿನ್ ಡ್ರಾ ಮಾಡುವ ಉದ್ದೇಶದಿಂದ ರೂಕ್ ಎಕ್ಸೆಂಜ್ ಮಾಡಿಕೊಂಡರು. ಚೆಸ್ನಲ್ಲಿ ಈ ನಿಯಮ ಸಾಮಾನ್ಯವಾಗಿ ಡ್ರಾ ಮಾಡಿಕೊಳ್ಳವ ಉದ್ದೇಶದಿಂದ ಮಾಡಲಾಗುತ್ತದೆ. ಇತ್ತೀಚೆಗೆ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಚೆಸ್ ತಾರೆ ಡಿ. ಗುಕೇಶ್, ಬ್ಲಿಟ್ಜ್ ಸ್ವರೂಪದಲ್ಲಿ ಎಡವಿದ್ದಾರೆ.
ಮೂರನೇ ಸುತ್ತಿನಲ್ಲಿ ನಡೆದಿದ್ದ ಈ ರೋಚಕ ಪಂದ್ಯದಲ್ಲಿ, ಕೊನೆಯ ನಿಮಿಷದಲ್ಲಿ ಗುಕೇಶ್ ಮಾಡಿದ ಒಂದೇ ಒಂದು ತಪ್ಪು ಅವರನ್ನು ಸೋಲಿನ ಸುಳಿಗೆ ಸಿಲುಕಿಸಿದೆ. ಒಂದು ಹಂತದಲ್ಲಿ ಗೆಲುವಿನ ಸನಿಹದಲ್ಲಿದ್ದ ಗುಕೇಶ್ ಸಮಯದ ಕೊರೆತೆಯಿಂದಾಗಿ ಕಾಯಿಯ ತಪ್ಪು ಚಲನೆಯಿಂದಾಗಿ ಅವರು ಪಂದ್ಯವನ್ನು ಕೈಚೆಲ್ಲಿದ್ದರು. ಇದು ಚೆಸ್ ಜಗತ್ತಿನಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಈ ಪಂದ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಗುಕೇಶ್ ತಾವೂ ಮಾಡಿದ ತಪ್ಪನ್ನು ತಿಳಿದು ಒಂದು ಕ್ಷಣ ಆಘಾತಕ್ಕೊಳಗಾದರು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕೇವಲ 12ನೇ ವಯಸ್ಸಿನಲ್ಲಿ ವಿಶ್ವ ದರ್ಜೆಯ ಆಟಗಾರನನ್ನು ಸೋಲಿಸಿದ ಸೆರ್ಗೆಯ್ ಶ್ಲೋಕಿನ್ ಅವರನ್ನು ಚೆಸ್ ದಿಗ್ಗಜರು ಹೊಗಳುತ್ತಿದ್ದಾರೆ.
ಕ್ರೀಡೆಯಲ್ಲಿ ಯಾರು ಬೇಕಾದರೂ ಯಾವಾಗ ಬೇಕಾದರೂ ಸೋಲಬಹುದು ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ. 12 ವರ್ಷದ ಸೆರ್ಗೆಯ ಗೆಲುವು ಚೆಸ್ ಜಗತ್ತಿನಲ್ಲಿ ಯುವ ಪ್ರತಿಭೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಈ ಸೋಲಿನಿಂದ ಗುಕೇಶ್ ಹೇಗೆ ಪಾಠ ಕಲಿತು ಮುಂದಿನ ಸುತ್ತುಗಳಲ್ಲಿ ಪುಟಿದೇಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಆದರೆ ಆಕ್ರಮಣಕಾರಿಯಾಗಿ ಆಡುವ ಮತ್ತು ಯಾವಾಗಲೂ ಗೆಲ್ಲಲು ಬಯಸುವ ಗುಕೇಶ್, ಡ್ರಾ ಪ್ರಸ್ತಾಪವನ್ನು ತಿರಸ್ಕರಿಸಿದ ರೂಕ್ ಎಕ್ಸೆಂಚ್ ಮಾಡಿಕೊಳ್ಳಲಿಲ್ಲ. ಅಲ್ಲದೆ ಪಂದ್ಯ ಗೆಲ್ಲಲು ಅಟ್ಯಾಕಿಂಗ್ ಮೋಡನಲ್ಲಿದ್ದ ಗುಕೇಶ್ ಕೊನೆಯಲ್ಲಿ ಎಡವಿದರು. ಇದು ತಂಡದ ಸೋಲಿಗೆ ಕಾರಣವಾಯ್ತು. ಈ ಪಂದ್ಯದಲ್ಲಿ ಆರಂಭದಿಂದಲೂ ಗುಕೇಶ್ ಮೇಲುಗೈ ಸಾಧಿಸಿದಂತೆ ಕಂಡುಬಂದರೂ, ಕೊನೆಯಲ್ಲಿ ಎಡವಿದರು. ಇದರ ಲಾಭ ಪಡೆದ ಸೆರ್ಗೆಯ್ ಪಂದ್ಯ ಗೆದ್ದರು.
ಇದಕ್ಕೂ ಮೊದಲು ಗುಕೇಶ್ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಆಡಿ 20ನೇ ಸ್ಥಾನ ಪಡೆದಿದ್ದರು. ಅವರು ಆರು ಪಂದ್ಯಗಳನ್ನು ಗೆದ್ದು ಮತ್ತು ಎರಡರಲ್ಲಿ ಸೋಲನ್ನು ಕಂಡರು. ರಾಪಿಡ್ ಚಾಂಪಿಯನ್ಶಿಪ್ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಚಿನ್ನದ ಪದಕ ಗೆದ್ದರೆ, ಭಾರತದ ಅರ್ಜುನ್ ಎರಿಗೈಸಿ ಮತ್ತು ಕೊನೆರು ಹಂಪಿ ಕಂಚಿನ ಪದಕ ಪಡೆದರು.