ಚಿಕ್ಕಮಗಳೂರು : ತಾಲೂಕಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯು ಯಶಸ್ವಿ ಮಾದರಿ ಶಾಲೆಗಳ ಉತ್ತಮ ಸಾಧನೆಗಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಪ್ಲಾನಿಂಗ್ ಅಂಡ್ ಅಡ್ಮಿನಿಸ್ಟ್ರೇಷನ್ (NIEPA) ನಡೆಸುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಯಶಸ್ವಿ ಶಾಲಾ ನಾಯಕತ್ವ ರಾಷ್ಟ್ರೀಯ ಸಮಾವೇಶಕ್ಕೆ ಅತ್ಯುತ್ತಮ ಮಾದರಿ ಶಾಲೆಗಳ ಅಡಿ ಈ ಸೆಲೆಕ್ಷನ್ ನಡೆದಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೂದಲಮನೆ ಹಾಗೂ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗರವಳ್ಳಿ ಆಯ್ಕೆಗೊಂಡಿವೆ. ಶಾಲೆಯ ಮುಖ್ಯೋಪಾಧ್ಯಾಯರು ಈ ಸಮಾವೇಶದಲ್ಲಿ ಭಾಗವಹಿಸಿ ಶಾಲೆಯ ಯಶೋಗಾಥೆಯ ಕುರಿತು 15 ನಿಮಿಷಗಳ ಕಾಲ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. 75 ವರ್ಷಗಳ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಂಗರವಳ್ಳಿಯು 1951ರಲ್ಲಿ ಕೂಲಿಮಠ ಹೆಸರಿನಲ್ಲಿ ಪ್ರಾರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲವಾಗಿದೆ.ವಿಕಸಿತ ಭಾರತ - 2047 ಸೃಜನಶೀಲ ಹಾದಿಗೆ ಪೂರಕವಾಗಿ NIEPA ಯಿಂದ ಆಯೋಜನೆಗೊಳ್ಳುವ ಯಶಸ್ವಿ ಶಾಲಾ ನಾಯಕತ್ವ ರಾಷ್ಟ್ರೀಯ ಸಮಾವೇಶಕ್ಕಾಗಿ ದೇಶಾದ್ಯಂತ 300ಕ್ಕೂ ಹೆಚ್ಚು ಶಾಲೆಗಳು ನಾಮನಿರ್ದೇಶನಗೊಂಡಿದ್ದು, ಇದರಲ್ಲಿ 55 ಮಾದರಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಿಂದ 2 ಶಾಲೆಗಳು ಸೆಲೆಕ್ಟ್ ಆಗಿವೆ.
ಶಾಲೆ ಆರಂಭದಲ್ಲಿ ಹಂಗರವಳ್ಳಿಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಕ್ರಮೇಣ ಖಾಸಗಿ ಕಾನ್ವೆಂಟ್ ಶಾಲೆಗಳ ಹೊಡೆತಕ್ಕೆ ಸಿಲುಕಿ 2018ರ ವೇಳೆಗೆ ಕೇವಲ 13 ಮಕ್ಕಳ ದಾಖಲಾತಿಯೊಂದಿಗೆ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆಯನ್ನು ಉಳಿಸಲು ಪಣತೊಟ್ಟು ‘ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್’ ಸ್ಥಾಪಿಸಿ ಸರ್ಕಾರಿ ಶಾಲೆಯಲ್ಲಿಯೇ ಸರ್ಕಾರದ ಅನುಮತಿಯೊಂದಿಗೆ ಎಲ್ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿ ಕ್ರಮೇಣ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಯಿತು.ಅಳಿವಿನಂಚಿನಲ್ಲಿದ್ದ ಶಾಲೆ ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆ ಕಂಡು ಪ್ರಸಕ್ತ ವರ್ಷ 265 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಹಳೆಯ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದನ್ನು ಮನಗಂಡ ಗ್ರಾಮಸ್ಥರು, ಟ್ರಸ್ಟ್‌ನ ಪದಾಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳಿಂದ ರೂ. 4 ಕೋಟಿ ಮೊತ್ತದ ನೆರವನ್ನು ಪಡೆದು 3 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ನೂತನ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ.ಸಂದರ್ಶನದ ಮೂಲಕ ಖಾಸಗಿ ಶಿಕ್ಷಕರನ್ನು ಈ ಶಾಲೆಗೆ ನೇಮಿಸಿ ಟ್ರಸ್ಟ್ ಮೂಲಕ ವೇತನ ನೀಡಲಾಯಿತು. ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ದಾನಿಗಳ ನೆರವಿನಿಂದ 2 ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರ ನೀಡುವ ಸಮವಸ್ತ್ರದ ಜೊತೆಗೆ ಹೆಚ್ಚುವರಿಯಾಗಿ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಟ್ರಸ್ಟ್ ಮೂಲಕ ನೀಡಲಾಗುತ್ತಿದೆ.265 ವಿದ್ಯಾರ್ಥಿಗಳು ಶಾಲೆಗೆ ದಾಖಲು : ಪ್ರಸ್ತುತ ಶಾಲೆಯಲ್ಲಿ ವಿಶಾಲವಾದ ಬೋಧನಾ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 500 ಆಸನವುಳ್ಳ ಆಡಿಟೋರಿಯಂ, ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಗಳಿವೆ. 60 ಸಿ.ಸಿ.ಕ್ಯಾಮೆರಾಗಳನ್ನು ದಾನಿಗಳೊಬ್ಬರು ಅಳವಡಿಸಿ ಕೊಟ್ಟಿದ್ದಾರೆ. ಪ್ರಸ್ತುತ ಸರ್ಕಾರಿ, ಅತಿಥಿ ಹಾಗೂ ಹೊರ ಸಂಪನ್ಮೂಲದ ಮೂಲಕ 13 ಶಿಕ್ಷಕರಿದ್ದಾರೆ. ಶಾಲೆಗೆ 265 ವಿದ್ಯಾರ್ಥಿಗಳು ದಾಖಲಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಸಭೆಯನ್ನು ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ನಡೆಸಿ ಪ್ರತಿ ವಿದ್ಯಾರ್ಥಿಯ ಪ್ರಗತಿ ಪರಿಶೀಲಿಸಲಾಗುತ್ತಿದೆ.ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಸಂವಹನ ನಡೆಸುವ ಕೌಶಲ ಹೊಂದಿದ್ದಾರೆ. ಇದರಿಂದಾಗಿ ಸ್ಥಳೀಯರು ತಮ್ಮ ಮಕ್ಕಳನ್ನು ಖಾಸಗಿ ಕಾನ್ವೆಂಟ್‌ಗಳಿಂದ ಬಿಡಿಸಿ ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದಾಗಿ ಪ್ರತಿ ಪೋಷಕರಿಗೆ ವಾರ್ಷಿಕವಾಗಿ ತುಂಬಾ ದೊಡ್ಡ ಮಟ್ಟದಲ್ಲಿ ಉಳಿತಾಯವಾಗುತ್ತಿದೆ.ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಪಣ : ಈ ಕುರಿತು ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಶ್ ಅವರು ಮಾತನಾಡಿ, 'ಇಲ್ಲಿ ಸುಮಾರು ಎಂಟು ಜನ ಖಾಸಗಿ ಶಿಕ್ಷಕರು ಹಾಗೂ 5 ಜನ ಸರ್ಕಾರಿ ಶಿಕ್ಷಕರೊಂದಿಗೆ ಉತ್ತಮವಾದ ಬೋಧನೆಯನ್ನು ಮಾಡುತ್ತಿದ್ದೇವೆ. ಹೈಟೆಕ್ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ನಮಗೆ ಸಹಕಾರ ಕೊಟ್ಟಿರುತ್ತದೆ. ಹಾಗೆಯೇ, ದಾನಿಗಳು ದೇಣಿಗೆ ಕೊಟ್ಟಿದ್ದಾರೆ. ಹಳ್ಳಿ ಮಕ್ಕಳನ್ನು ಕೇವಲ ಸಾಕ್ಷರರನ್ನಾಗಿಸದೇ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಪಣತೊಟ್ಟಿದ್ದೇವೆ. ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಗುರುತಿಸಿಕೊಳ್ಳುವಂತಹ ಸಮಯ ಇದಾಗಿದೆ. ಸಮಾಜ ಜವಾಬ್ದಾರಿಯನ್ನು ತೆಗೆದುಕೊಂಡರೆ ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ನಮ್ಮ ಶಾಲೆ ಮಾದರಿಯಾಗಿದೆ' ಎಂದು ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ಆಹಾರ ಶ್ವಾಸಕೋಶದಲ್ಲಿ ಸಿಕ್ಕಿದರೆ ನೀರು ಕುಡಿಯುವುದು ಹಾನಿಕಾರಕ : ಎಚ್ಚರಿಕೆ