<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಭಾರತ-ಪಾಕ್ ಯುದ್ಧ ತಡೆದಿದ್ದು ನಾವು ಎಂದ ಚೀನಾ

ಭಾರತ-ಪಾಕ್ ಯುದ್ಧ ತಡೆದಿದ್ದು ನಾವು ಎಂದ ಚೀನಾ
Summary: ಭಾರತ-ಪಾಕಿಸ್ತಾನ ಯುದ್ಧ ಸೇರಿದಂತೆ ಜಾಗತಿಕವಾಗಿ ಅನೇಕ ಸಂಘರ್ಷಗಳನ್ನು ನಿಲ್ಲಿಸಲು ಪ್ರಯತ್ನಿಸಿರುವುದಾಗಿ ಚೀನಾ ಹೇಳಿದೆ.
ನವದೆಹಲಿ: ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಚೀನಾದ ವಿದೇಶಾಂಗ ಸಂಬಂಧಗಳ ಕುರಿತು ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ವಾಂಗ್ ಯಿ, ಭಾರತ-ಪಾಕಿಸ್ತಾನ ಬಿಕ್ಕಟ್ಟು ಸೇರಿದಂತೆ ಹಲವಾರು ಜಾಗತಿಕ ಸಂಘರ್ಷಗಳಲ್ಲಿ ಬೀಜಿಂಗ್ ಮಧ್ಯಸ್ಥಿಕೆಯ ಪಾತ್ರ ವಹಿಸಿದೆ ಎಂದಿದ್ದಾರೆ. ಈ ಹೇಳಿಕೆಯನ್ನು ಚೀನಾದ ವಿದೇಶಾಂಗ ಸಚಿವಾಲಯದ ಎಕ್ಸ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ.
ಸುಂಕ ಬೆದರಿಕೆ ಹಾಕಿ ಮಾತುಕತೆ ನಡೆಸುವ ಮೂಲಕ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 70 ಬಾರಿ ಹೇಳಿದ ಬಳಿಕ ಇದೀಗ ಚೀನಾ, ಈ ಯುದ್ಧ ನಿಲ್ಲಿಸಲು ನಾವು ಮಧ್ಯಸ್ಥಿಕೆ ವಹಿಸಿದ್ದೆವು ಎಂದಿದೆ.
ಚೀನಾದ ಈ ಹೇಳಿಕೆ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಪಾತ್ರದ ಕುರಿತು ತಿಳಿಸಿದೆ. ಚೀನಾ ವಿಶೇಷವಾಗಿ ಪಾಕಿಸ್ತಾನದೊಂದಿಗೆ ನಿಕಟ ರಕ್ಷಣಾ ಸಂಬಂಧ ಹೊಂದಿದ್ದು, ಪಾಕ್ಗೆ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನೂ ಹೌದು.
ಶಾಶ್ವತ ಶಾಂತಿಯನ್ನು ನಿರ್ಮಿಸಲು, ನಾವು ವಸ್ತುನಿಷ್ಠ ಮತ್ತು ನ್ಯಾಯಯುತ ನಿಲುವು ತೆಗೆದುಕೊಂಡಿದ್ದೇವೆ. ನಾವು ಉತ್ತರ ಮ್ಯಾನ್ಮಾರ್, ಇರಾನ್ ಪರಮಾಣು ಸಮಸ್ಯೆ, ಪಾಕಿಸ್ತಾನ ಮತ್ತು ಭಾರತದ ನಡುವಿನ ಸೇನಾ ಸಂಘರ್ಷ, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವಿನ ಸಮಸ್ಯೆಗಳು ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ನವೆಂಬರ್ನಲ್ಲಿ ಯುಎಸ್ ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗದಲ್ಲಿ ಚೀನಾ ಆಪರೇಷನ್ ಸಿಂಧೂರ್ ಕುರಿತು ತಪ್ಪು ಮಾಹಿತಿ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಅಂತ್ಯಕ್ಕೆ ಯಾವುದೇ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ವಹಿಸಿಲ್ಲ. ಇದು ಎರಡು ದೇಶಗಳ ಸೇನಾ ಮುಖ್ಯಸ್ಥರ ನಡುವಿನ ಮಾತುಕತೆಯಿಂದ ಕೊನೆಗೊಂಡಿತ್ತು ಎಂದು ಭಾರತ ಸ್ಪಷ್ಟಪಡಿಸುತ್ತಾ ಬಂದಿದೆ.
ಆಪರೇಷನ್ ಸಿಂಧೂರ್ನ ಮೊದಲ ದಿನದಂದು ಸಂಯಮ ಕಾಯ್ದುಕೊಳ್ಳುವಂತೆ ಚೀನಾ ಕರೆ ನೀಡಿತ್ತು. ಭಾರತ ನಡೆಸಿದ ಪ್ರತಿದಾಳಿಗಳಿಗೆ ವಿಷಾದ ವ್ಯಕ್ತಪಡಿಸಿತ್ತು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತ ಮೇ ತಿಂಗಳಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ನಡೆಸಿತ್ತು. ನಾಲ್ಕು ದಿನ ನಡೆದ ಸೇನಾ ಸಂಘರ್ಷ ಸೇನಾ ಮುಖ್ಯಸ್ಥರ ಮಾತುಕತೆಯೊಂದಿಗೆ ಅಂತ್ಯಗೊಂಡಿತ್ತು.
ಫ್ರೆಂಚ್ ರಫೇಲ್ ಫೈಟರ್ ಜೆಟ್ಗಳ ಮಾರಾಟವನ್ನು ದುರ್ಬಲಗೊಳಿಸುವ ಮತ್ತು ತನ್ನ ಜೆ-35 ವಿಮಾನಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಬೀಜಿಂಗ್ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಿಕೊಂಡು ತಪ್ಪು ಮಾಹಿತಿ ಹರಡುತ್ತಿದೆ ಎಂದು ಯುಎಸ್ ಕಾಂಗ್ರೆಸ್ ಸಲಹಾ ಸಂಸ್ಥೆ ಹೇಳಿದೆ.
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online