ಪ್ರಸ್ತುತ ರಾಜ್ಯದ ಶಿಕ್ಷಣ ವಲಯದಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಸಿಎಸ್ಆರ್) ಕೊಡುಗೆಗಳು ನೇರವಾಗಿ ಆಯಾ ಶಾಲೆ ಮತ್ತು ಕಾಲೇಜುಗಳಿಗೆ ದೇಣಿಗೆ ನೀಡುತ್ತಿದ್ದು, ಇದು ಸಾಮಾನ್ಯವಾಗಿ ಸ್ಥಳ, ಅನುಕೂಲ ಅಥವಾ ವ್ಯಕ್ತಿನಿಷ್ಠಗಳನ್ನು ಆಧರಿಸಿರುತ್ತದೆ.
ಪ್ರಸ್ತುತ ಕೈಗಾರಿಕಾ ಘಟಕಗಳು ಅಥವಾ ಖಾಸಗಿ ಸಂಸ್ಥೆಗಳು ತಮ್ಮ ಪ್ರಧಾನ ಕಚೇರಿಗಳ ಸಮೀಪದ ಸ್ಥಳೀಯತೆ ಆಧರಿಸಿ ಸಿ.ಸಿ.ಎಸ್.ಆರ್. ನಿಧಿಯನ್ನು ಸ್ವತಂತ್ರ ತರಗತಿ ಕೊಠಡಿಗಳು, ಶೌಚಾಲಯಗಳು, ಪೀಠೋಪಕರಣಗಳು, ಪ್ರಯೋಗಾಲಯ ಉಪಕರಣಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್ ಬೋರ್ಡ್‌ಗಳು ಮತ್ತು ಅಂತರ್ಜಾಲ ಸಂಪರ್ಕ ವೃದ್ಧಿ ಮುಂತಾದುವುಗಳ ಮೂಲಸೌಕರ್ಯಕ್ಕಾಗಿ ಒಂದು ಬಾರಿಗೆ ದೇಣಿಗೆಗಳ ರೂಪದಲ್ಲಿ ನೀಡುತ್ತಿವೆ.
ಸಿಎಸ್ಆರ್ ನಿಧಿಯನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಇದೀಗ ಹೊಸ ಸಿಎಸ್ಆರ್ ನೀತಿ ರೂಪಿಸಲು ಮುಂದಾಗಿದೆ.ಕಾರ್ಪೊರೇಟ್ ಸಂಸ್ಥೆಗಳ ಸಿಎಸ್ಆರ್ ನಿಧಿಯನ್ನು ಬಹುವಾಗಿ ಸರ್ಕಾರಿ ಶಾಲೆಗಳ ಮೇಲೆ ಹೂಡಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿನ ವಿವಿಧ ಕಾರ್ಪೋರೇಟ್ ಕಂಪನಿಗಳಿಂದ ವಾರ್ಷಿಕವಾಗಿ 8,500 ಕೋಟಿ ಸಿಎಸ್‌ಆರ್ ನಿಧಿಯಡಿ ಲಭ್ಯವಿದೆ. ಈ ನಿಧಿಯನ್ನು ಹೆಚ್ಚಾಗಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕರ್ನಾಟಕ ಸುಮಾರು 47,193 ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಹೊಂದಿದ್ದು, ಅವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿ ಪೂರ್ವ ಕಾಲೇಜುಗಳಾಗಿವೆ. ಪ್ರಸ್ತುತ 309 ಸರ್ಕಾರಿ ಶಾಲೆಗಳು ಮಾತ್ರ LKG ಯಿಂದ 12ನೇ ತರಗತಿಯವರೆಗೆ ಸಂಯೋಜಿತ ಶಿಕ್ಷಣವನ್ನು ಹೊಂದಿರುತ್ತವೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸರ್ಕಾರಿ ಶಾಲೆಗಳಲ್ಲಿ 2015-16 ರಲ್ಲಿ 47.1 ಲಕ್ಷ ವಿದ್ಯಾರ್ಥಿಗಳ ದಾಖಲಾತಿಯಿಂದ 2025 - 26ರಲ್ಲಿ 38.2 ಲಕ್ಷಕ್ಕೆ ಗಣನೀಯವಾಗಿ ಕುಸಿದಿದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು ಶೇ 46 ರಿಂದ ಶೇ.38 ಕ್ಕೆ ಇಳಿದಿದೆ (19% ಕುಸಿತ). 2025-26ರಲ್ಲಿ ಸರ್ಕಾರಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 46,137 ಮತ್ತು 38.20 ಲಕ್ಷ ಮತ್ತು ಸರ್ಕಾರಿ ಪಿಯು ಕಾಲೇಜುಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 1.319 ಲಕ್ಷ ಮತ್ತು 2.77 ಲಕ್ಷ. 2025-26 ರಲ್ಲಿ ಖಾಸಗಿ ಅನುದಾನಿತ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 6.13 ಲಕ್ಷ ಮತ್ತು 11.16 ಲಕ್ಷ ಮತ್ತು 2025-26ರಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 16.52 ಲಕ್ಷ ಮತ್ತು 48.02 ಲಕ್ಷಗಳಾಗಿರುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಹಲವಾರು ಖಾಸಗಿ ವಲಯದ ಸಂಸ್ಥೆಗಳು, ಟ್ರಸ್ಟ್ಗಳು, ದಾನಿಗಳು, ಪ್ರತಿಷ್ಠಾನಗಳು, ಸರ್ಕಾರೇತರ ಸಂಸ್ಥೆಗಳು (NGOs) ಮುಂತಾದ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಕೊಡುಗೆ ನೀಡುತ್ತಿವೆ. 2023-24ನೇ ಆರ್ಥಿಕ ವರ್ಷದಲ್ಲಿ ಅಂದಾಜು ರೂ.81 ಕೋಟಿಗಳು ಮತ್ತು 2024-25ನೇ ಆರ್ಥಿಕ ವರ್ಷದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಕರಿಗೆ ತರಬೇತಿ ಮತ್ತು ಡಿಜಿಟಲ್ ಶಿಕ್ಷಣ ಬೆಂಬಲವನ್ನು ಒದಗಿಸುವುದು ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ರಾಜ್ಯಾದ್ಯಂತ ಅಂದಾಜು ರೂ.352 ಕೋಟಿಗಿಂತಲೂ ಹೆಚ್ಚು ಸಿ.ಸಿ.ಎಸ್.ಆರ್. ಕೊಡುಗೆಗಳನ್ನು ನೀಡಲಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಂಜೂರಾತಿಯ ಅಗತ್ಯ ಇರುವುದಿಲ್ಲ. ಸಿಸಿಎಸ್ಆರ್ ಪ್ರಸ್ತಾವನೆಯೊಂದಿಗೆ ಮುಂದೆ ಬರುವ ಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆ ಆಯುಕ್ತರ ಮಧ್ಯೆ ತಿಳಿವಳಿಕಾ ಪತ್ರ ಸಹಿ ಹಾಕಿಸುವ ಸಂಬಂಧ ಜಿಲ್ಲಾಧಿಕಾರಿಗಳು ಸಮನ್ವಯತೆ ಸಾಧಿಸಬೇಕು. ಒಂದು ವೇಳೆ ಉಪನ್ಯಾಸಕರ ಹುದ್ದೆ ಖಾಲಿ ಇದ್ದರೆ ಜ್ಞಾನ ಪಾಲುದಾರರು ತಮ್ಮ ಶಾಲೆಗಳಿಂದ ಉಪನ್ಯಾಸಕರನ್ನು ನಿಯೋಜಿಸಬೇಕು. ಆಂಥ ಉಪನ್ಯಾಸಕರ ವೇತನವನ್ನು ಜ್ಞಾನ ಪಾಲುದಾರರೇ ಭರಿಸಬೇಕು. ಇದರಿಂದ ಉಪನ್ಯಾಸಕರ ಕೊರತೆ ನೀಗಲಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಬಲೀಕರಣ ಮತ್ತು ಸಾಮರ್ಥ್ಯ ಅಭಿವೃದ್ಧಿ ಕ್ರಮಗಳ ಮೂಲಕ ಸಮಾಜದ ಸಮಗ್ರ ಬೆಳವಣಿಗೆ ಮತ್ತು ಸಮಾನ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶವಿರಲಿದೆ. ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ನವೀಕರಿಸುವುದರ ಮೇಲೆ ಈ ನೀತಿ ಕೇಂದ್ರೀಕೃತವಾಗಿರಲಿದೆ. ಈ ಶಾಲೆಗಳಲ್ಲಿನ ಮೂಲಭೂತ ಸೌಕರ್ಯ, ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಶೈಕ್ಷಣಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೆ ನವೀಕರಣದ ಮೂಲಕ ಕಲಿಕೆಯ ವಾತಾವರಣವನ್ನು ಉತ್ತಮಪಡಿಸಲಿದೆ.
ಸಿ.ಸಿ.ಎಸ್.ಆರ್ ನೀತಿ ಸರ್ಕಾರಿ ಶಾಲೆಗಳನ್ನು LKG ಯಿಂದ 12ನೇ ತರಗತಿಯವರೆಗೂ ಸೌಲಭ್ಯಗಳನ್ನು ಹೊಂದಿರುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ, ಉತ್ತಮ ಸಂಪನ್ಮೂಲ ಬಳಕೆ ಮತ್ತು ಆಡಳಿತಕ್ಕಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಸಣ್ಣ ಶಾಲೆಗಳ ಒಗ್ಗೂಡುವಿಕೆಯ ಮೂಲಕ ಶಾಲಾ ಬಲವರ್ಧನೆ ಹಾಗೂ ಶಾಲಾ ಸಂಕೀರ್ಣಗಳ ಸ್ಥಾಪನೆಯ ಮೂಲಕ ಶಾಲಾ ಕ್ರೋಢೀಕರಣಕ್ಕೆ ಒತ್ತು ನೀಡಲಿದೆ.
ಇನ್ನಷ್ಟು ಓದಿರಿ:
ಹೊಸ ಟರ್ಬೊ-ಪೆಟ್ರೋಲ್ ಎಂಜಿನ್ ಫೀಚರ್ಸ್: ಟೀಸರ್ ಬಿಡುಗಡೆ