ಇದಕ್ಕೂ ಮುನ್ನ, ರಥ ಸಾಗುವ ದಾರಿಯನ್ನು ಭಕ್ತರು ಶುಚಿಗೊಳಿಸಿ ರಂಗೋಲಿ ಹಾಕಿದ್ದರು. ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿದ್ದರು. ತಳಿರು ತೋರಣಗಳನ್ನು ಕಟ್ಟಿದ್ದರು.
ಜಾತ್ರೆಯ ಅಂಗವಾಗಿ ಸಂಜೆ ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಮಠದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ತಡರಾತ್ರಿ ಮಠದ ಆವರಣಕ್ಕೆ ರಥ ಬರುತ್ತಿದ್ದಂತೆ ಗಂಗಾರತಿ ಮಾದರಿಯಲ್ಲಿ ಶಿವಾರತಿ ಮಾಡಲಾಯಿತು. ಇದರೊಂದಿಗೆ ಜಾತ್ರಾ ಮಹೋತ್ಸವ ಕೊನೆಗೊಂಡಿತು.
ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯ ಹಲವು ಬಗೆಯ ಜಾನಪದ ಕಲಾತಂಡಗಳನ್ನು ಕರೆಸಲಾಗಿತ್ತು. ರಥೋತ್ಸವದುದ್ದಕ್ಕೂ ಸಾಗಿಬಂದ ಕಲಾತಂಡಗಳ ಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು. ಪುರವಂತಿಕೆ, ಬೇಗೂರಿನ ನಂದಿಕೋಲು, ತುಮಕೂರಿನ ಸಮಾಳ, ವೀರಗಾಸೆ, ಗೊಂಬೆಗಳು, ಡೊಳ್ಳುಕುಣಿತ, ನಂದಿಕುಣಿತ ಮತ್ತು ಹುಲಿವೇಷ ಸೇರಿದಂತೆ ಹಲವು ಕಲಾತಂಡಗಳು ಕಲಾಪ್ರದರ್ಶನ ನೀಡಿದವು.
ಈ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳು ನಡೆದವು. 75 ಗ್ರಾಮಗಳಲ್ಲಿ ಜನಜಾಗೃತಿ ಪಾದಯಾತ್ರೆ, ದುಶ್ಚಟಗಳ ಭೀಕ್ಷೆ ಸದ್ಗುಣಗಳ ದೀಕ್ಷೆ, ಸುಕುಮಾರ ಜ್ಯೋತಿ ಮೆರವಣಿಗೆ, ಕಾರು ಜಾಥಾ ಬೈಕ್ ಜಾಥಾ, ಚಟ ಹೋಮ, ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸದಾಶಿವ ಶ್ರೀಗಳು ಪೀಠಾಧಿಪತಿಯಾಗಿ 15 ವರ್ಷ ಸಂದ ಹಿನ್ನೆಲೆಯಲ್ಲಿ ಬೆಳ್ಳಿ ತುಲಾಭಾರ, 51 ಸಾವಿರ ಜನರಿಂದ ಸಾಮೂಹಿಕ ವಚನ ಗಾಯನ, ತಿರಂಗಾ ಬಣ್ಣದ ಸೀರೆತೊಟ್ಟು 6 ಸಾವಿರ ಮಹಿಳೆಯರಿಂದ 6 ಲಕ್ಷ ಶೇಂಗಾ ಹೋಳಿಗೆಯ ಶಿವಬಸವ ಬುತ್ತಿ ಕಾರ್ಯಕ್ರಮಗಳು ನಡೆದವು.
ಜಾನುವಾರು ಜಾತ್ರೆ 54 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ ಸುವರ್ಣ ಮಹೋತ್ಸವ, ಹಸು ಪ್ರದರ್ಶನ, ಶ್ವಾನ ಪ್ರದರ್ಶನ, ಮತ್ಸ್ಯ ಪ್ರದರ್ಶನ, ಕೃಷಿಪರಿಕರಗಳ ಪ್ರದರ್ಶನ, ಫಲಪುಷ್ಪ ಪ್ರದರ್ಶನ ಸೇರಿದಂತೆ ಹಲವು ವಿದಾಯಕ ಕಾರ್ಯಕ್ರಮಗಳು ನಡೆದವು.
ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆಯಿಂದಲೇ ವಿವಿಧ ಅಭಿಷೇಕಗಳನ್ನು ಮಾಡಿ ಗಣಾರಾಧನೆ ಮಾಡಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಉಭಯ ಶ್ರೀಗಳು ಗದ್ದುಗೆಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತರು ಸರತಿಯಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆದರು. ಹಣ್ಣುಕಾಯಿ ನೈವೇದ್ಯ ಹಿಡಿದು ಪೂಜೆ ಸಲ್ಲಿಸಿ, ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.