ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನು ಅಳವಡಿಸಿಕೊಂಡು ಅದರ ಪೂರ್ಣಪಾಠ ಬಳಸಬೇಕು ಹಾಗೂ ಆಲಾಪವಿಲ್ಲದೇ, ಪುನರಾವರ್ತನೆ ಇಲ್ಲದೆ 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕ್ರಮವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು, ಎರಡು ಚರಣಗಳಿಗೆ ಮಾತ್ರ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿದ್ದಾರೆ. ಇಡೀ ನಾಡಗೀತೆಗೆ ಸಂಯೋಜನೆ ಮಾಡಿಲ್ಲ. ಈ ಸಂಬಂಧ 2013 & 2014ರಲ್ಲಿ ಸರ್ಕಾರವು ಎರಡು ಸಮಿತಿ ರಚಿಸಿತ್ತು. ಈ ಸಮಿತಿಗಳ ಯಾವುದೇ ಮಾಹಿತಿಯನ್ನು ಪರಿಗಣಿಸಿಲ್ಲ.
18 ಸದಸ್ಯರ ಸಮಿತಿಯ ಅಭಿಪ್ರಾಯ ಆಧರಿಸಿ ಈ ಆದೇಶ ಮಾಡಲಾಗಿದೆ. ಸಾರ್ವಜನಿಕರು ಅಥವಾ ಸಂಬಂಧಿತರ ಆಕ್ಷೇಪಣೆಯನ್ನು ಪರಿಗಣಿಸಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ರಾಷ್ಟ್ರಗೀತೆಯನ್ನು ನಿರ್ದಿಷ್ಟ ರಾಗದಲ್ಲೇ ಹಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ, ಇಡೀ ನಾಡಗೀತೆಗೆ ಒಂದೇ ರೀತಿಯ ರಾಗ ಸಂಯೋಜನೆ ಇಲ್ಲ. ಎರಡು ಚರಣಗಳಿಗೆ ಮಾತ್ರ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಇದನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ.
ಕಿಕ್ಕೇರಿ ಕೃಷ್ಣಮೂರ್ತಿ ಅವರು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ. ರಾಷ್ಟ್ರಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂಬ ನಿಯಮವಿಲ್ಲ. ಹೀಗಾಗಿ, ನಾಡಗೀತೆಯನ್ನು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂದು ನಿರ್ದೇಶಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಇಡೀ ನಾಡಗೀತೆಗೆ ಸಂಯೋಜಿಸುವ ರಾಗ ಸಂಯೋಜನೆಯನ್ನು ಪಾಲಿಸಬೇಕು ಎಂದು ಹಿಂದಿನ ಎರಡು ಸಮಿತಿಗಳು ಹೇಳಿವೆ ಎಂದು ಪೀಠಕ್ಕೆ ವಿವರಿಸಿದರು. ನೀವಿ ಇಚ್ಛಿಸಿದಂತೆ ಹಾಡದಂತೆ ನಿಮ್ಮನ್ನು ತಡೆಯುತ್ತಿರುವವರು ಯಾರು? ನಿಮ್ಮ ಇಚ್ಛೆಯಂತೆ ಹಾಡಬಾರದು ಎಂದು ರಾಜ್ಯ ಸರ್ಕಾರ ಹೇಳಿಲ್ಲ.
ಸಂವಿಧಾನಬದ್ಧವಾಗಿ 19(1)(ಎ)ನೇ ವಿಧಿಯಡಿ ನಿಮಗೆ ಹಕ್ಕಿದೆ. ಇದನ್ನು ಮಾಡದಂತೆ ನಿಮಗೆ ನಿಷೇಧ ವಿಧಿಸಿರುವ ಸರ್ಕಾರದ ಕ್ರಮ ತೋರಿಸಬೇಕು. ನಿರ್ದಿಷ್ಟ ರಾಗದಲ್ಲಿ ಹಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ಅದು ನಿಮ್ಮ ಸಂವಿಧಾನಬದ್ಧ ಹಕ್ಕಿಗೆ ಚ್ಯುತಿ ಉಂಟು ಮಾಡಿಲ್ಲ. ಆಕ್ಷೇಪಣೆ ಪರಿಗಣಿಸಿದೆಯೇ ಇಲ್ಲವೇ ಎಂಬುದರ ಹೊರತಾಗಿ ಅದು ನಿಮ್ಮ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿದೆಯೇ ಎಂದು ಪ್ರಶ್ನಿಸಿತು.
ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು. ಜಯ ಭಾರತ ಜನನಿಯ ತನುಜಾತೆ, ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ಥ್ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ.ಅಶ್ವತ್ಥ್ ಅವರು ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು 2024ರ ಏಪ್ರಿಲ್ 24ರಂದು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಿಕ್ಕೇರಿ ಕೃಷ್ಣಮೂರ್ತಿ ಮೇಲ್ಮನವಿ ಸಲ್ಲಿಸಿದ್ದು, ಇದೀಗ ವಜಾಗೊಂಡಿದೆ.
ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 'ಜಯ ಭಾರತ ಜನನಿಯ ತನುಜಾತೆ' ನಾಡಗೀತೆ ಹಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಇನ್ನಷ್ಟು ಓದಿರಿ :
ಜನವರಿ 27 ರಂದು ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ