ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಶನಿವಾರ ಭಾರತ ತಂಡವನ್ನು ಪ್ರಕಟಗೊಳಿಸಿದೆ. ಶುಭಮನ್ ಗಿಲ್ ನಾಯಕಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಉಪನಾಯಕ ಆಗಿ ತಂಡಕ್ಕೆ ಮರಳಿದ್ದಾರೆ. ಅಯ್ಯರ್ ಫಿಟ್ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದರೇ ಮಾತ್ರ ಏಕದಿನ ಸರಣಿಯಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಈಗಾಗಲೇ ಮಂಡಳಿ ತಿಳಿಸಿದೆ. ಉಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಬಹುತೇಕ ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಪಡಿಕ್ಕಲ್ ದಾಖಲೆ: ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅವರ ದಾಖಲೆ ಆರಂಭದಿಂದಲೂ ಉತ್ತಮವಾಗಿದೆ. ಈ ಎಡಗೈ ಬ್ಯಾಟ್ಸ್‌ಮನ್ 50 ಓವರ್‌ಗಳ ದೇಶೀಯ ಪಂದ್ಯಾವಳಿಯಲ್ಲಿ ಇದುವರೆಗೆ 33 ಪಂದ್ಯಗಳನ್ನು ಆಡಿದ್ದಾರೆ, 94.74 ರ ಸರಾಸರಿಯಲ್ಲಿ 2525 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 25 ಇನ್ನಿಂಗ್ಸ್‌ಗಳಲ್ಲಿ 12 ಶತಕಗಳು ಸೇರಿದಂತೆ 50+ ರನ್ ಗಳಿಸಿದ್ದಾರೆ. ಈ ಪ್ರಭಾವಶಾಲಿ ದಾಖಲೆಯ ಹೊರತಾಗಿಯೂ, ದೇವದತ್ ಪಡಿಕ್ಕಲ್ ಇನ್ನೂ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ. ಪಡಿಕ್ಕಲ್ ಈಗಾಗಲೇ ಭಾರತಕ್ಕಾಗಿ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ .
ಆದರೆ, ದೇಶಿಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಆರ್ಸಿಬಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ ಎಂದು ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದಾರೆ. ಹೌದು, ಕಿವೀಸ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಘೋಷಿಸುವ ಮೊದಲು, ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಏಕದಿನ ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂಬ ಊಹಾಪೋಹವಿತ್ತು, ಆದರೆ ಅದು ಕಾರ್ಯಗತವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಇದಲ್ಲದೇ ಪಡಿಕ್ಕಲ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 13 ಶತಕಗಳನ್ನು ಗಳಿಸಿದ್ದಾರೆ. ಅವರ ಎಲ್ಲಾ 13 ಶತಕಗಳು ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂದಿವೆ ಎಂಬುದು ಗಮನಾರ್ಹ. ಇದರೊಂದಿಗೆ, ಅವರು ಏಕದಿನ ಮಾದರಿಯ ಲಿಸ್ಟ್ ಎ ಪಂದ್ಯಾವಳಿಯ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶತಕಗಳ ವಿಷಯದಲ್ಲಿ, ಅವರು ಪ್ರಸ್ತುತ ಕರ್ನಾಟಕದ ನಾಯಕ ಮಯಾಂಕ್ ಅಗರ್ವಾಲ್ (12) ಅವರನ್ನು ಹಿಂದಿಕ್ಕಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಂಕಿತ್ ಬವಾನೆ ಮತ್ತು ರುತುರಾಜ್ ಗಾಯಕ್ವಾಡ್ ಮಾತ್ರ ಪಡಿಕ್ಕಲ್‌ಗಿಂತ ಮುಂದಿದ್ದಾರೆ. ಬವಾನೆ ಟೂರ್ನಮೆಂಟ್‌ನಲ್ಲಿ 15 ಶತಕಗಳನ್ನು ಗಳಿಸಿದ್ದಾರೆ ಮತ್ತು ರುತುರಾಜ್ 14 ಶತಕಗಳನ್ನು ಬಾರಿಸಿದ್ದಾರೆ. ಸದ್ಯ ಪಡಿಕ್ಕಲ್ ಅವರ ಪ್ರದರ್ಶನ ಗಮನಿಸಿದರೇ ಈ ಇಬ್ಬರೂ ಆಟಗಾರರನ್ನು ಮೀರಿಸಲಿದ್ದಾರೆ.
2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ, ಭರ್ಜರಿ ಪ್ರದರ್ಶನ ನೀಡುತ್ತಿರುವ ದೇವದತ್ ಪಡಿಕ್ಕಲ್ ಸ್ಥಿರ ಪ್ರದರ್ಶನ ನೀಡುತ್ತಿದ್ದು ಶತಕ ಮೇಲೆ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರು ಈ ಪಂದ್ಯಾವಳಿಯಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ ಮತ್ತು 102.8ರ ಸರಾಸರಿಯಲ್ಲಿ 514 ರನ್ ಕಲೆಹಾಕಿದ್ದಾರೆ. ಆದಾಗ್ಯೂ, ಅವರನ್ನು ಏಕದಿನ ಸರಣಿಗಾಗಿ ಟೀಮ್ ಇಂಡಿಯಾ ತಂಡದಲ್ಲಿ ಸೇರಿಸಲಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿವೆ.
ಇನ್ನಷ್ಟು ಓದಿರಿ:
ಟಿ-20 ಸರಣಿಯಿಂದ ಹೊರಗುಳಿದ ಸ್ಟಾರ್ ಬ್ಯಾಟ್ಸ್‌ಮನ್