ಬಿಜಿ ರಾಮ್ ಜಿ ಕಾಯ್ದೆ ವಿರೋಧಿಸಿ ವಿಶೇಷ ಚರ್ಚೆಗಾಗಿ ಇಂದಿನಿಂದ ಆರಂಭವಾಗುತ್ತಿರುವ ರಾಜ್ಯ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದಾರಾ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮನ್ರೇಗಾ ಬದಲಿಗೆ ಜಾರಿಗೊಳಿಸಿರುವ ಬಿಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ಕಠಿಣ ನಿಲುವು ತಾಳಿದ್ದು, ಈ ಹಿನ್ನೆಲೆಯಲ್ಲಿ ಕರೆಯಲಾಗಿರುವ ಅಧಿವೇಶನದಲ್ಲಿ ಸರ್ಕಾರ–ರಾಜ್ಯಪಾಲರ ನಡುವಿನ ಸಂಬಂಧ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗುವ ಸಾಧ್ಯತೆ ಇದೆ.
ರಾಜ್ಯಪಾಲರ ಭಾಷಣದ ಮೇಲೆ ನಡೆಯುವ ಚರ್ಚೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ತೀವ್ರ ಪ್ರತಿಕ್ರಿಯೆಗಳು ಹಾಗೂ ಕೇಂದ್ರ ಸರ್ಕಾರದ ಕ್ರಮಗಳ ಕುರಿತು ರಾಜ್ಯ ಸರ್ಕಾರ ಕೈಗೊಳ್ಳುವ ಮುಂದಿನ ಹೆಜ್ಜೆಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಇಂದಿನಿಂದ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಾಜ್ಯ ಸರ್ಕಾರ ಸಿದ್ದಪಡಿಸಿರುವ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳು ಸೇರಿರುವುದಕ್ಕೆ ರಾಜ್ಯಪಾಲರು ಅಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಭಾಷಣವನ್ನು ಓದಲು ನಿರಾಕರಿಸಿರುವುದು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣ ನಿಗದಿಯಾಗಿದ್ದು, ಆ ವೇಳೆ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದರತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಈ ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ವಿಶೇಷ ಚರ್ಚೆ ನಡೆಸುವುದೇ ರಾಜ್ಯ ಸರ್ಕಾರದ ಪ್ರಮುಖ ಅಜೆಂಡಾ ಆಗಿದೆ. ಮನ್ರೇಗಾ ಬದಲಿಗೆ ಈ ಕಾಯ್ದೆ ಜಾರಿಗೆಗೊಳಿಸಿರುವುದರಿಂದ ಬಡವರು ಹಾಗೂ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಮೇಲೆ ಹೊಡೆತ ಬೀಳಲಿದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರದ ವಿರುದ್ಧ ಕಠಿಣ ನಿಲುವು ತಾಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯಪಾಲರು ಅಂಶಗಳನ್ನು ಓದಲು ನಿರಾಕರಿಸಿದ್ದೇಕೆ ? :
ಸಂವಿಧಾನಕ ಸಂಪ್ರದಾಯದಂತೆ, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಬೇಕು. ಆದರೆ, ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೆಚ್ಚು ಟಿಗೆಗಳಿರುವುದರಿಂದ ಅದನ್ನು ಸಂಪೂರ್ಣವಾಗಿ ಓದಲು ರಾಜ್ಯಪಾಲರು ನಿರಾಕರಿಸಿರುವುದು ರಾಜಕೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದರಿಂದ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಂವಿಧಾನಿಕ ಗೊಂದಲ ಉಂಟಾಗುವ ಸಾಧ್ಯತೆ ಎದುರಾಗಿದೆ.
ವಿಬಿ ಜಿ ರಾಮ್ ಜಿ ಕಾಯ್ದೆ ಚರ್ಚೆಗೆ ಮುನ್ನ ರಾಜ್ಯಪಾಲರ ನಡೆ:
ರಾಜ್ಯಪಾಲ ಥಾ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ನಿರಾಕರಿಸುತ್ತಾರೋ, ಭಾಷಣ ಮಾಡದೆ ಹೊರ ನಡೆಯುತ್ತಾರೋ ಅಥವಾ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಓದಲು ನಿರಾಕರಿಸುತ್ತಾರೋ ಎಂಬುದು ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳು ತಮಿಳುನಾಡು ಮತ್ತು ಕೇರಳದಲ್ಲಿ ಕಂಡು ಬಂದ ರಾಜ್ಯಪಾಲ–ಸರ್ಕಾರ ನಡುವಿನ ಸಂಘರ್ಷವನ್ನು ನೆನಪಿಸುವಂತಿದ್ದು, ಕರ್ನಾಟಕದಲ್ಲೂ ಅಂಥದೇ ಪರಿಸ್ಥಿತಿ ನಿರ್ಮಾಣವಾಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಸಂವಿಧಾನದ 176 ಪರಿಚ್ಛೇದದ ಪ್ರಕಾರ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಂವಿಧಾನಿಕ ಬಾಧ್ಯತೆ ಹೊಂದಿದ್ದಾರೆ. ಆದರೆ, ಭಾಷಣದಲ್ಲಿ ಸೇರಿರುವ ಎಲ್ಲಾ ಅಂಶಗಳನ್ನು ಓದಲೇ ಬೇಕೆಂಬ ಕಡ್ಡಾಯ ನಿಯಮ ಇಲ್ಲ. ಇದೇ ಕಾರಣ ತಮಿಳುನಾಡು ಹಾಗೂ ಕೇರಳದಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲವು ಅಂಶಗಳನ್ನು ಓದಲು ನಿರಾಕರಿಸಿದ್ದ ಉದಾಹರಣೆಗಳು ಈಗಾಗಲೇ ಇವೆ.
ಅದೇ ರೀತಿಯಲ್ಲಿ, ಕರ್ನಾಟಕದಲ್ಲೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ವಿರುದ್ಧ ಇರುವ ಅಂಶಗಳನ್ನು ಕೈ ಬಿಟ್ಟು ಉಳಿದ ಭಾಗವನ್ನು ಮಾತ್ರ ಓದುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈ ಮೂಲಕ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಾಂವಿಧಾನಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ಕರ್ನಾಟಕದ ಇತಿಹಾಸದಲ್ಲಿ ಇದುವರೆಗೆ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಕೆಲವೊಂದು ಸಣ್ಣ ಮಟ್ಟದ ಸಂಘರ್ಷಗಳು ನಡೆದಿದ್ದರೂ, ದೊಡ್ಡಮಟ್ಟದ ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಉದಾಹರಣೆಗಳು ಬಹಳ ವಿರಳ. ಆದರೆ, ಈ ಬಾರಿ ವಿಬಿ ಜಿ ರಾಮ್ ಜಿ ಕಾಯ್ದೆ ವಿಚಾರವಾಗಿ ಕೇಂದ್ರ–ರಾಜ್ಯ ಸಂಘರ್ಷ ತೀವ್ರಗೊಂಡಿರುವುದರಿಂದ, ಜಂಟಿ ಅಧಿವೇಶನದ ಮೊದಲ ದಿನವೇ ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಇದೆ.
ಜಂಟಿ ಅಧಿವೇಶನದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟಿನ ಆತಂಕ :
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೂ ಮುನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆ ಕಾನೂನು ಸಚಿವ ಎಚ್ .ಕೆ. ಪಾಟೀಲ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ, ಸರ್ಕಾರ ಸಿದ್ಧಪಡಿಸಿರುವ ಭಾಷಣದ ಕುರಿತು ಮನವೊಲಿಕೆಗೆ ಯತ್ನಿಸಿತ್ತು. ಈ ವೇಳೆ ರಾಜ್ಯಪಾಲರು ಭಾಷಣದಲ್ಲಿರುವ ಒಟ್ಟು 11 ಪ್ಯಾರಾಗಳ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವುಗಳನ್ನು ಕೈ ಬಿಡುವಂತೆ ಸ್ಪಷ್ಟವಾಗಿ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ್ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರಿಗೆ ತಿಳಿಸಿದ್ದಾರೆ. ಬಳಿಕ ಸರ್ಕಾರವು ಕೆಲವು ಅಂಶಗಳನ್ನು ಮಾತ್ರ ಮಾರ್ಪಾಡು ಮಾಡಲು ಒಪ್ಪಿಕೊಂಡಿದ್ದು, ಎಲ್ಲಾ ಪ್ಯಾರಾಗಳನ್ನು ತೆಗೆದುಹಾಕಲು ನಿರಾಕರಿಸಿದೆ. ಅದರಂತೆ, ಭಾಷಣದಲ್ಲಿನ ಕೆಲವು ವಿವಾದಾತ್ಮಕ ಅಂಶಗಳನ್ನು ತಿದ್ದುಪಡಿ ಮಾಡಲಾಗಿದೆ. ಆದರೆ, ನರೇಗಾ ಸಂಬಂಧಿತ ಅಂಶವನ್ನು ತೆಗೆದು ಹಾಕಲು ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯಪಾಲ ಗೆಹ್ಲೋಟ್ ಅವರ ಮುಂದಿನ ನಡೆ ಏನು ಎಂಬುದೇ ಈಗ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆ ವಿಷಯವಾಗಿದೆ. ಅವರು ತಮಿಳುನಾಡು ರಾಜ್ಯಪಾಲರ ಮಾದರಿಯಲ್ಲಿ ಭಾಷಣ ಓದದೆ ವಾಕ್ ಔಟ್ ಮಾಡುತ್ತಾರಾ? ಅಥವಾ ಕೇರಳದ ರಾಜ್ಯಪಾಲರಂತೆ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳನ್ನು ಕೈ ಬಿಟ್ಟು ಉಳಿದ ಭಾಷಣವನ್ನು ಓದುತ್ತಾರಾ? ಎಂಬುದರ ಬಗ್ಗೆ ಎಲ್ಲರ ತೀವ್ರ ಕುತೂಹಲ ಉಂಟಾಗಿದೆ.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತದೆಯೋ ಅಥವಾ ಸಾಂವಿಧಾನಿಕ ಬಿಕ್ಕಟ್ಟಿನ ಸಂಕೇತವಾಗುತ್ತದೆಯೋ ಎಂಬುದನ್ನು ಕರ್ನಾಟಕದ ರಾಜಕೀಯ ವಲಯ ಉಸಿರು ತಡೆದು ಕಾಯುತ್ತಿದೆ.
ಇನ್ನಷ್ಟು ಓದಿರಿ:
ವಿವಾದಾತ್ಮಕ ವಿಬಿಜಿ ರಾಮ್ ಜಿ ಯೋಜನೆ ವಿಚಾರದಲ್ಲಿ ಅಧಿವೇಶನ ಅನಗತ್ಯ