ಹಿಪ್ಪರಗಿ ಬ್ಯಾರೇಜ್ ಗೇಟ್ ನಿರ್ವಹಣೆಯಲ್ಲಿ ಲೋಪ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ - ಲೋಪ ಎಸಗಿದವರಿಗೆ ಸಂಕಷ್ಟ: ಹಿಪ್ಪರಗಿ ಗೇಟ್ ಹಗರಣದಲ್ಲಿ ಸವದಿ ಗರ್ಜನೆ!
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಶನಿವಾರ ಮಾತನಾಡಿದ ಅವರು, ಸುಮಾರು ನಾಲ್ಕು ದಿನಗಳ ಹಿಂದೆ ನೀರಿನ ಹೆಚ್ಚಿದ ಒತ್ತಡದಿಂದ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕಿತ್ತುಹೋಗಿತ್ತು.
ಇದರಿಂದಾಗಿ ಸುಮಾರು 8 ರಿಂದ 9 ಸಾವಿರ ಕ್ಯೂಸೆಕ್ ನೀರು ವ್ಯರ್ಥವಾಗಿ ಹೊರ ಹೋಗುತ್ತಿತ್ತು. ಹೀಗಾಗಿಯೇ ಜಮಖಂಡಿ, ಅಥಣಿ, ಕಾಗವಾಡ, ಚಿಕ್ಕೋಡಿ ಮತ್ತು ರಾಯಬಾಗ ತಾಲೂಕುಗಳ ಸುಮಾರು 700 ಹಳ್ಳಿಗಳ ಕುಡಿಯುವ ನೀರು ಮತ್ತು 3 ಲಕ್ಷ ಹೆಕ್ಟೇರ್ ಪ್ರದೇಶದ ನೀರಾವರಿಗೆ ಆತಂಕ ಎದುರಾಗಿತ್ತು. ಅಧಿಕಾರಿಗಳು ಮತ್ತು ತಜ್ಞರು ಹಗಲು ರಾತ್ರಿ ಶ್ರಮಿಸಿ ಎರಡು ದಿನಗಳಲ್ಲಿ ಗೇಟ್ ಅನ್ನು ಪುನಃ ಅಳವಡಿಸಿದ್ದಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.
ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಒಂದು ನಿಯೋಗ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರಿನ ಬಗ್ಗೆ ಚರ್ಚಿಸಲಿದ್ದೇವೆ.
ಬ್ಯಾರೇಜ್ ನಿರ್ವಹಣೆಗೆ ಪ್ರತಿ ವರ್ಷ ಸಮಯ ಸಿಗುತ್ತಿತ್ತು, ಆದರೆ ಈ ವರ್ಷ ಬೇಗ ಮಳೆ ಬಂದಿದ್ದರಿಂದ ಕೆಲವು ಗೇಟ್‌ಗಳ ಮೇಂಟೆನೆನ್ಸ್ ಬಾಕಿ ಉಳಿದಿತ್ತು. ಬ್ಯಾರೇಜ್‌ನ ಎಲ್ಲಾ ಗೇಟ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸಿ, ಅಗತ್ಯವಿದ್ದರೆ ಅವುಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸುಮಾರು 300 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಈಗಲೂ ಸ್ವಲ್ಪ ಪ್ರಮಾಣದ ಸೋರಿಕೆ (100-150 ಕ್ಯೂಸೆಕ್) ಇದ್ದು, ಅದನ್ನು ಸರಿಪಡಿಸಲು ಹೊಸಪೇಟೆಯಿಂದ ತಜ್ಞರು ಬರುತ್ತಿದ್ದಾರೆ. ನೀರಿನ ಲಭ್ಯತೆ ಮತ್ತು ಇತರ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರದೊಂದಿಗೆ ಮಾತುಕತೆ ಮಾಡಲಾಗುತ್ತದೆ, ಗೇಟ್ ಕಿತ್ತುಹೋದ ಕಾರಣ ಸುಮಾರು 2 ಟಿಎಂಸಿ ನೀರು ಕೆಳಭಾಗಕ್ಕೆ ಹರಿದು ಹೋಗಿದೆ.
ಇದು ವ್ಯರ್ಥವಾಗಿಲ್ಲ, ಆಲಮಟ್ಟಿ ಅಣೆಕಟ್ಟಿನ ರೈತರಿಗೆ ಉಪಯೋಗವಾಗಿದೆ. ಆದರೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಮ್ಮ ಭಾಗದ ರೈತರಿಗೆ ನೀರಿನ ಕೊರತೆಯಾಗಬಹುದು. ಇದನ್ನು ನೀಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು 2 ಟಿಎಂಸಿ ನೀರನ್ನು ಕೇಳಲು ನಿರ್ಧರಿಸಲಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಒಂದು ನಿಯೋಗ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರಿನ ಬಗ್ಗೆ ಚರ್ಚಿಸಲಿದೆ. ಒಂದು ವೇಳೆ ಅವರು ಹಣ ಕೇಳಿದರೂ ಸಹ ನೀರು ತರಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದರು.
ಗೇಟ್ ಕಿತ್ತುಹೋಗಲು ನಿರ್ವಹಣೆಯ ಲೋಪವೇ ಕಾರಣ ಎಂಬ ಆರೋಪಗಳಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಇಂಜಿನಿಯರ್ ಅಥವಾ ನಿರ್ವಹಣೆ ಮಾಡುವವರ ಲೋಪ ಕಂಡು ಬಂದರೆ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇನ್ನಷ್ಟು ಓದಿರಿ:
18 ಲಕ್ಷದ ಕೆಲಸ ಬಿಟ್ಟು ಕೋಟಿ ಕೋಟಿ ಹಣ ಗಳಿಸಿದ ರೈತ