ಪ್ರಭಾಸ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಟನೆಯ ಹಾರರ್ ಫ್ಯಾಂಟಸಿಯ 'ರಾಜಾಸಾಬ್' ಚಿತ್ರ ನಾಳೆ ತೆರೆ ಕಾಣಲಿದ್ದು, ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ವಿತರಿಸಲಿದೆ.
'ರಾಜಾಸಾಬ್' ಪಕ್ಕಾ ಕಮರ್ಷಿಯಲ್, ಹಾರರ್ ಮತ್ತು ಫ್ಯಾಂಟಸಿ ಎಂಟರ್ಟೈನರ್ ಚಿತ್ರವಾಗಿದ್ದು, ಮನರಂಜನೆಯ ಜತೆಗೆ ಭಾವನಾತ್ಮಕ ಫ್ಯಾಂಟಸಿ ಎಲಿಮೆಂಟ್ಸ್ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯಲಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದೆ.
ಇಡೀ ಚಿತ್ರದ ಶೂಟಿಂಗ್ ನಡೆದ ಪೀಪಲ್ ಮೀಡಿಯಾ ಫ್ಯಾಕ್ಟರಿ ಸ್ಟುಡಿಯೋದಲ್ಲಿ ಹಾಕಿದ್ದ ಪುರಾತನ ಭವ್ಯ ಬಂಗಲೆಯ ಸೆಟ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ವೇದಿಕೆಯಲ್ಲಿ ನಿರ್ಮಾಪಕರಾದ ಟಿ.ಜಿ.ವಿಶ್ವಪ್ರಸಾದ್, ಕೃತಿ ಪ್ರಸಾದ್, ಚಿತ್ರದ ನಿರ್ದೇಶಕ ಮಾರುತಿ, ನಾಯಕಿಯರಾದ ನಿಧಿ ಅಗರವಾಲ್, ರಿದ್ಧಿ ಕುಮಾರ್, ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಹಾಜರಿದ್ದರು.
ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಜಾಸಾಬ್' ಜ.9ರಂದು ತೆರೆಗೆ ಬರುತ್ತಿದ್ದು, ಕರ್ನಾಟಕದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಪಡೆದುಕೊಂಡಿದೆ. ಮಾರುತಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ, ಪ್ರಭಾಸ್ ಹೊಸದೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ದೇಶಾದ್ಯಂತ ಚಿತ್ರ ತೆರೆ ಕಾಣಲಿದೆ.ಟ್ರೇಲರ್, ಹಾಡುಗಳ ಪ್ರದರ್ಶನದ ನಂತರ ಮಾತನಾಡಿದ ನಿರ್ಮಾಪಕ ಟಿ.ಜಿ.ವಿಶ್ವಪ್ರಸಾದ್, ರಾಜಾಸಾಬ್ ಮೂರು ವರ್ಷಗಳ ಹಿಂದೆ ಈ ಸಿನಿಮಾ ಪಯಣ ಪ್ರಾರಂಭವಾಯಿತು. ಜ.9ಕ್ಕೆ ರಿಲೀಸ್ ಆಗುತ್ತಿದೆ. ಹಾರರ್ ಫ್ಯಾಂಟಸಿ ಎಲ್ಲ ಭಾಷೆಗೂ ಹೊಂದಿಕೊಳ್ಳುತ್ತದೆ. ನಮ್ಮ ಚಿತ್ರ ಪ್ರೇಕ್ಷಕರಿಗೆ ಅದ್ಭುತ ಫ್ಯಾಂಟಸಿ ಅನುಭವ ನೀಡುತ್ತದೆ ಎಂದರು. ನಾಯಕಿ ನಿಧಿ ಅಗರವಾಲ್ ಮಾತನಾಡಿ, ನಾನೂ ಸಹ ಈ ಸೆಟ್ ತುಂಬೆಲ್ಲ ಓಡಾಡಿದ್ದೇನೆ. ಇಲ್ಲಿ ತುಂಬಾ ನೆನಪುಗಳಿವೆ. ಪ್ರಭಾಸ್ ಜತೆ ಅಭಿನಯಿಸಿದ್ದು ಖುಷಿಯ ಸಂಗತಿ. ನಾಳೆ ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದು ತಿಳಿಸಿದರು.
ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಹಿರಿಯ ನಟಿ ಜರೀನಾ ವಹಾಬ್ ನಾಯಕನ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಥಮನ್ ಅವರ ಸಂಗೀತ ಸಂಯೋಜನೆ ಮತ್ತು ಕಾರ್ತಿಕ್ ಪಳನಿ ಅವರ ಛಾಯಾಗ್ರಹಣವಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯ ಬ್ಯಾನರ್ ಅಡಿ ಟಿ.ಜಿ. ವಿಶ್ವ ಪ್ರಸಾದ್ ಅವರು ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದಾರೆ. ಕರ್ನಾಟಕದಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜಾಸಾಬ್ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಮಾರುತಿ ಮಾತನಾಡಿ, ಒಂದೂವರೆ ವರ್ಷದಿಂದ ಈ ಸೆಟ್ ತುಂಬೆಲ್ಲ ಓಡಾಡಿದ್ದೇವೆ. ಆ ನೆನಪು ಎಂದಿಗೂ ಮಾಸದು. ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ನನಗೆ ಈ ಅವಕಾಶ ನೀಡಿದ್ದಕ್ಕೆ ನಾನು ಚಿರಋಣಿ. ಇದು ಕೇವಲ ಸಿನಿಮಾ ಅಲ್ಲ, ಒಂದು ಬಿಗ್ ಹಾರರ್-ಫ್ಯಾಂಟಸಿ ಅನುಭವ. ಚಿತ್ರದ ಪ್ರತಿ ದೃಶ್ಯವೂ ಅಭಿಮಾನಿಗಳಿಗೆ ಹಬ್ಬದಂತಿರಲಿದೆ ಎಂದು ಹೇಳಿದರು.
ಇನ್ನಷ್ಟು ಓದಿರಿ:
ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರಬಂದ ಅಮೆರಿಕ