ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ದುಡ್ಡು ತಿನ್ನುವ ವ್ಯವಸ್ಥೆ ಇದರಲ್ಲಿ ಇತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.'
ಸರಿಯಾಗಿ ಕೆಲಸ ಕೊಟ್ಟು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡುವ ಪ್ರತಿ ರಾಜ್ಯಕ್ಕೆ 17 ಸಾವಿರ ಕೋಟಿ ರೂ. ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಅಂದಾಜು ಮೂಲಕ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಮನರೇಗಾ ಇದ್ದಾಗಲೂ ಬೇರೆ ಬೇರೆ ರಾಜ್ಯ ಸರ್ಕಾರಗಳ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಉದ್ಯೋಗ ಕೊಟ್ಟಿದ್ದರು. ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದ ಬಹಳಷ್ಟು ಉದಾಹರಣೆಗಳಿವೆ ಎಂದರು.
ಜೆಸಿಬಿ ಮೂಲಕ ಕೆಲಸ ಮಾಡಿ ವಸೂಲಿ: ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ ತಯಾರಿಸಿ ವಿಕಸಿತ್ ಭಾರತ್ ರೂರಲ್ ಇನ್‍ಫ್ರಾಸ್ಟ್ರಕ್ಚರ್ ಅಡಿ ಸೇರಿಸುತ್ತಾರೆ. ಇದರಲ್ಲಿ ಗುಣಮಟ್ಟ ಮತ್ತು ಎಷ್ಟು ಕೆಲಸ ಎಂಬುದಕ್ಕೆ ಆದ್ಯತೆ ಕೊಡುತ್ತೇವೆ. ಮೊದಲು ಕೇವಲ ಎಷ್ಟು ಕೆಲಸ ಎಂಬುದನ್ನಷ್ಟೇ ಗಮನಿಸುತ್ತಿದ್ದರು. ಜೆಸಿಬಿ ಮೂಲಕ ಕೆಲಸ ಮಾಡಿ ವಸೂಲಿ ಮಾಡುತ್ತಿರಲಿಲ್ಲ ಎಂದು ಒಬ್ಬರಾದರೂ ಹೇಳಲಿ. 20, 30, 40 ರೂ. ಕಾರ್ಮಿಕರಿಗೆ ಕೊಟ್ಟು ಅದನ್ನೆಲ್ಲ ವಸೂಲು ಮಾಡಿರಲಿಲ್ಲವೇ? ಎಂದು ಕೇಳಿದರು.
ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಇದರ ಬಗ್ಗೆ ಕಾಂಗ್ರೆಸ್ ಪಕ್ಷವು 10ರಿಂದ ಹೋರಾಟ ಮಾಡಲು ಕರೆ ನೀಡಿದೆ. 20 ವರ್ಷಗಳ ಹಿಂದೆ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ, ದೇಶ- ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು. ವಿಕಸಿತ ಭಾರತ ಆದಾಗ ಮೂಲಭೂತ ಸೌಕರ್ಯ, ದೀರ್ಘಾವಧಿಯ ಆಸ್ತಿಗಳಿರುವ ವಿಕಸಿತ ಗ್ರಾಮವೂ ಆಗದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿ ಆಗಲಿವೆ ಎಂಬ ಮಹತ್ವದ ಅಂಶವೂ ಇದರಲ್ಲಿದೆ. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಅವರೂ ಮಾಡಿದ್ದಾರೆ. ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಇದು ಕಸಿಯಲಿದೆ ಎಂಬ ಸುಳ್ಳನ್ನು ಅವರು ಹೇಳುತ್ತಿದ್ದಾರೆ. ಇದು ಶುದ್ಧಾಂಗ ಸುಳ್ಳು. ಇದು ಯಾವುದೇ ರೀತಿಯ ಕೇಂದ್ರದ ಯೋಜನೆ ಅಥವಾ ಕೇಂದ್ರ ಪ್ರಾಯೋಜಿತ ಯೋಜನೆ ಮಾಡಲು ಕಾನೂನಿನ ಅಗತ್ಯವಿಲ್ಲ. ವಿಬಿ-ಜಿ ರಾಮ್ ಜಿ ಎಂಬುದು ಸಂಸತ್ತಿನ ಕಾಯ್ದೆ ಎಂದು ತಿಳಿಸಿದರು. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ. ಇದನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಹೇಳಿದರು.
ಈ ಯೋಜನೆಯಲ್ಲೂ ಹಗರಣ ಮುಂದುವರೆಸುವ ಇಚ್ಛೆ ಇದ್ದುದರಿಂದ ಅವರು ವಿರೋಧಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಪಾರದರ್ಶಕ ಮಾಡಿದ್ದಕ್ಕಾಗಿ ಅವರ ಹೋರಾಟ. ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯಿತಿಗಳೇ ನಿರ್ಧಾರ ಮಾಡುತ್ತವೆ. ಯಾವ ಹಳ್ಳಿಯಲ್ಲಿ ಯಾವ ಮೂಲಭೂತ ಸೌಕರ್ಯ ನಿರ್ಮಾಣ ಆಗಲಿದೆ ಎಂದು ತಿಳಿದುಕೊಳ್ಳುವ ಅವಕಾಶ ಇರುವ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಇದನ್ನು ತರಲಾಗಿದೆ. ಗತಿ ಶಕ್ತಿ ಯೋಜನೆಯಡಿ ಬೇರೆ ಬೇರೆ ಉದ್ದೇಶದ 85 ಲಕ್ಷ ಕೋಟಿ ಹೂಡಿಕೆಯ ವಿಭಿನ್ನ ಯೋಜನೆಗಳು ಮಂಜೂರಾಗಿವೆ. ಇಲ್ಲವಾದರೆ ಅವು ಹಾಗೇ ಬಿದ್ದಿರುತ್ತಿದ್ದವು ಎಂದು ತಿಳಿಸಿದರು. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ನಿಮಗೆ ಬುದ್ಧಿ ಬೇಡವೇ?: 80 ವರ್ಷದ ಕಾರ್ಮಿಕರೂ ಇದ್ದಾರೆ. ಅವರ ಹೆಸರಿಗೆ ದುಡ್ಡು ಹಾಕಿದ್ದಾರೆ. ಹಳೆ ಕಲ್ಲು ಹೊಸ ಬಿಲ್ -ಇದು ಎಲ್ಲ ಕಡೆ ನಡೆದಿದೆ. 100 ದಿನಗಳ ಕಾಲ ಕೆಲಸ ಕೊಡಬೇಕಾದ ದಲಿತ ಮಹಿಳೆಯೊಬ್ಬರ ಹೆಸರಿನಲ್ಲಿ ದುಡ್ಡು ಹೊಡೆದಿದ್ದರು. ಸಿದ್ದರಾಮಯ್ಯರ ಮೊದಲ ಅವಧಿಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ದುಡ್ಡು ಹೊಡೆದ ಇಂಥ ಸಾವಿರ ಉದಾಹರಣೆಗಳಿವೆ. ಇದರಲ್ಲಿ ಬದಲಾವಣೆ, ಪಾರದರ್ಶಕತೆ ಬೇಡವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ನಿಮಗೆ ಬುದ್ಧಿ ಬೇಡವೇ ಸಿದ್ದರಾಮಯ್ಯನವರೇ? ಎಂದು ವಾಗ್ದಾಳಿ ನಡೆಸಿದರು. ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ: 100 ದಿನ ಇದ್ದುದನ್ನು 125 ದಿನ ಮಾಡಿದರೆ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ?. ಹಿಂದೆ ಕೂಲಿ ಪಾವತಿಗೆ ನಿಗದಿತ ಕಾಲಾವಧಿ ಇರಲಿಲ್ಲ. ಈಗ 14 ದಿನದಲ್ಲಿ ಕೊಡಬೇಕು. ಇಲ್ಲವೇ ದಂಡ ಹಾಕುತ್ತಾರೆ. ಈಗ ಜಗತ್ತಿನ ಅತಿದೊಡ್ಡ 4ನೇ ಆರ್ಥಿಕ ಶಕ್ತಿಯಾಗಿ ನಾವು ಪರಿವರ್ತನೆಗೊಂಡಿದ್ದೇವೆ. ಅತಿ ಶೀಘ್ರವೇ ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಈ ಹಿಂದೆ ಕೆಲಸ ಆಗಲೀ, ಇಲ್ಲದೇ ಇರಲಿ; ದುಡ್ಡು ಪಾವತಿ ಆಗುತ್ತಿತ್ತು. ಮೇಲ್ವಿಚಾರಣೆಯಿಂದ ಇದು ಬಂದ್ ಆಗಲಿದೆ ಎಂದರು. ಆಧಾರ್ ಸೇರ್ಪಡೆ 2014ರವರೆಗೆ 76 ಲಕ್ಷ ಇತ್ತು. ಈಗ ಅದನ್ನು 12.11 ಕೋಟಿಗೆ ಏರಿಸಿದ್ದೇವೆ. ಯಾರು ಬರುತ್ತಾರೋ ಅವರಿಗೆ ಕೆಲಸ ಕೊಡುತ್ತೇವೆ. ಹಿಂದೆ ಡಿಜಿಟಲ್ ಇ ಪಾವತಿ ಶೇ 37ರಷ್ಟಿತ್ತು. ಇವರು ದುಡ್ಡು ಹಾಗೇ ಕೈಯಲ್ಲಿ ಕೊಡುತ್ತಿದ್ದರು. ನಾವು ಡಿಜಿಟಲ್ ಪಾವತಿ ಪ್ರಮಾಣವನ್ನು ಶೇ 99ಕ್ಕೆ ಏರಿಸಿದ್ದೇವೆ. ಆ ಕಾರಣದಿಂದ ಬಜೆಟ್‍ನಲ್ಲಿ ಮತ್ತು ಜವಾಬ್ದಾರಿಯಲ್ಲಿ ಭಾಗೀದಾರಿಕೆ ಅನಿವಾರ್ಯ. ನಾವು 125 ದಿನಕ್ಕೆ ನಮ್ಮ ಮೊತ್ತ ಹೆಚ್ಚಿಸುತ್ತೇವೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಜಾಸ್ತಿ ಹಣ ಸಿಗಲಿದೆ ಎಂದು ವಿಶ್ಲೇಷಿಸಿದರು.
ಇನ್ನಷ್ಟು ಓದಿರಿ:
ಎಕ್ಸ್ ಪೋಸ್ಟನ ಮೂಲಕ ಹೆಚ್ ಡಿಕೆಯವರು ಡಿಕೆಶಿಯವರಿಗೆ ತಿರುಗೇಟು