ಅನಾದಿ ಕಾಲದಿಂದ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಬಿಲ್ವ ಪತ್ರೆ ಹಂಚುವ ಮೂಲಕ ಹೂಗಾರ ಸಮುದಾಯ ಆ ಕಾಯಕದಲ್ಲಿ ತೊಡಗಿತ್ತು. ಆಯಾ ಪ್ರದೇಶಕ್ಕೆ ಅನುಸಾರವಾಗಿ ಬೇರೆ ಬೇರೆ ಸಮುದಾಯದವರು ಈ ಸುದ್ದಿ ಮುಟ್ಟಿಸುತ್ತಿದ್ದರು. ಕಾಲ ಬದಲಾದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಮೃತರ ಕುರಿತು ಪೋಸ್ಟ್ ಮಾಡಿ ಜನರಿಗೆ ಮಾಹಿತಿ ಕೊಡಲಾಗುತ್ತಿದೆ. ಇದರ ನಡುವೆ ತಮ್ಮ ಮನೆ ಟೆರೆಸ್ ಮೇಲೆ ಲೌಡ್ ಸ್ಪೀಕರ್ ಮೂಲಕ ಸಾವಿನ ಸುದ್ದಿಯನ್ನು ಇಲ್ಲೊಂದು ವೈದ್ಯ ದಂಪತಿ ಬಿತ್ತರಿಸುವ ಅಪರೂಪದ ಕಾಯಕ ಮಾಡುತ್ತಿದ್ದಾರೆ.
ಸರ್ವಧರ್ಮೀಯರ ಸಾವಿನ ಸುದ್ದಿ ಅನೌನ್ಸ್ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇವರ ಪವಿತ್ರ ಕಾಯಕ ಮೆಚ್ಚುಗೆ ಗಳಿಸಿದೆ.
ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದಿಸಿ ವಿಶ್ವದಾಖಲೆ ನಿರ್ಮಿಸಿದ ಭಾರತದ ಪ್ರಥಮ ವೈದ್ಯ ಎಂಬ ಖ್ಯಾತಿಗೆ ಪಾತ್ರರಾಗಿರುವ ಡಾ.ಮಹಾಂತೇಶ ರಾಮಣ್ಣವರ, ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮೂಲಕ ದೇಹದಾನ, ಅಂಗಾಂಗ, ನೇತ್ರ ಮತ್ತು ರಕ್ತದಾನದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮುಂದುವರಿಸಿದ್ದಾರೆ.
ಇಷ್ಟೇ ಅಲ್ಲದೇ "ಸಾವು ಕೆಟ್ಟದ್ದಲ್ಲ, ಸಾವಿನ ಭಯ ಕೆಟ್ಟದ್ದು" ಎನ್ನುವ ಸಂದೇಶ ಸಾರುವ ನಿಟ್ಟಿನಲ್ಲಿ ಮೃತಪಟ್ಟವರ ಹೆಸರನ್ನು ತಮ್ಮ ಮನೆಯ ಮೇಲೆ ಅನೌನ್ಸ್ ಮಾಡಿಸುತ್ತಿರುವುದು ವಿಶೇಷ.
ಕೆಎಲ್ಇ ಬಿ.ಎಂ.ಕೆ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಡಾ.ಮಹಾಂತೇಶ ರಾಮಣ್ಣವರ ಸೇವೆ ಸಲ್ಲಿಸುತ್ತಿದ್ದರೆ, ಪತ್ನಿ ಡಾ.ಸುರೇಖಾ ಅವರು ದಂತವೈದ್ಯೆ. ಬೈಲಹೊಂಗಲ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ತಮ್ಮ ಮನೆಯಲ್ಲೇ ಹಲ್ಲಿನ ಆಸ್ಪತ್ರೆ ನಡೆಸುತ್ತಾರೆ.
ಡಾ.ಮಹಾಂತೇಶ ರಾಮಣ್ಣವರ, "ಮುಸ್ಲಿಂ ಸಮಾಜದವರು ಯಾರಾದರೂ ಮೃತಪಟ್ಟರೆ ಮಸೀದಿಯಲ್ಲಿ ಅನೌನ್ಸ್ ಮಾಡುವುದನ್ನು ನಾನು ಬೆಳಗ್ಗೆ ವಾಕಿಂಗ್ ಹೋಗಿದ್ದಾಗ ಅನೇಕ ಬಾರಿ ಕೇಳಿದ್ದೆ. ಇದರಿಂದ ಪ್ರೇರೇಪಿತನಾಗಿ ಪೊಲೀಸ್ ಇಲಾಖೆ ಅನುಮತಿ ಪಡೆದುಕೊಂಡು 2017ರಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಅನೌನ್ಸ್ ಮಾಡಿಸಲು ಶುರು ಮಾಡಿದೆ.
ಆಮೇಲೆ ನನಗೆ ಬಹಳಷ್ಟು ಕಿರಿಕಿರಿ ಅನಿಸಿತು. ಆದರೆ, ಇದರ ಅವಶ್ಯಕತೆ ಅರಿತು ಮುಂದುವರಿಸಿದೆ. ಆರಂಭದಲ್ಲಿ ಬಾಬಣ್ಣ ಯಡಹಳ್ಳಿ ಎಂಬವರು ಬಂದು ಯಾವುದೇ ಹಣ ಪಡೆಯದೇ ನಿಸ್ವಾರ್ಥದಿಂದ ಮೈಕ್ ಮೂಲಕ ಅನೌನ್ಸ್ ಮಾಡಿ ಹೋಗುತ್ತಿದ್ದರು. ಅವರಿಗೆ ಅನಾನುಕೂಲ ಉಂಟಾದಾಗ ನನ್ನ ಪತ್ನಿ ಡಾ.ಸುರೇಖಾ ಅವರು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ" ಎಂದು ಹೇಳಿದರು.
ನಿಧನವಾರ್ತೆ ಅನೌನ್ಸ್ ಮಾಡುವ ಡಾ.ಸುರೇಖಾ ರಾಮಣ್ಣವರ ಮಾತನಾಡಿ, "ನಮ್ಮ ಮನೆಯ ಮೂರನೇ ಮಹಡಿಯಲ್ಲಿ ನಿಧನವಾರ್ತೆ ಸುದ್ದಿ ಮನೆ ಮಾಡಿದ್ದೇವೆ. ಶ್ರದ್ಧಾಂಜಲಿ ವಾಟ್ಸ್‌ಆ್ಯಪ್ ಗ್ರೂಪ್ನಲ್ಲಿ ಬಂದ ನಿಧನವಾರ್ತೆಯನ್ನು ಮಕರಜ್ಯೋತಿ ಔಷಧಿ ಅಂಗಡಿ ಮಾಲೀಕ ಮಹಾಂತೇಶ ಹಿಟ್ಟಣಗಿ ಅವರು ನನಗೆ ವಾಟ್ಸ್ ಆ್ಯಪ್ನಲ್ಲಿ ಕಳಿಸುತ್ತಾರೆ. ಅದನ್ನು ನಾನು ವಾಯ್ಸ್ ರೆಕಾರ್ಡ್ ಮಾಡಿ ಅವರಿಗೆ ಕಳಿಸುತ್ತೇನೆ. ಅವರು ಮೇಲೆ ಹೋಗಿ ಅದನ್ನು ಪ್ಲೇ ಮಾಡುತ್ತಾರೆ.
ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ಆಸ್ಪತ್ರೆಯಲ್ಲಿ ರೋಗಿಗಳು ಇರುತ್ತಾರೆ. ಅವರಿಗೆ ಚಿಕಿತ್ಸೆ ನೀಡುವಾಗಲೇ ಇದಕ್ಕಾಗಿ ನಾನು ಮೂರು ನಿಮಿಷ ಸಮಯ ತೆಗೆದುಕೊಂಡು ರೆಸ್ಟ್ ರೂಮ್ಗೆ ತೆರಳಿ ವಾಯ್ಸ್ ಕೊಡುತ್ತೇನೆ. ಇದು ನನಗೇನೂ ಕಷ್ಟ ಆಗುವುದಿಲ್ಲ. ನಮ್ಮ ಯಜಮಾನರು ಸಮಾಜಕ್ಕೆ ದೊಡ್ಡ ಸೇವೆ ಸಲ್ಲಿಸುತ್ತಿದ್ದಾರೆ. ಅವರಷ್ಟು ನನಗೆ ಆಗದಿದ್ದರೂ ಈ ರೀತಿ ಆದರೂ ಸೇವೆ ಸಲ್ಲಿಸುತ್ತಿದ್ದೇನೆ ಎನ್ನುವ ಖುಷಿ ಮತ್ತು ಸಂತೃಪ್ತಿ ನನಗಿದೆ" ಎಂದರು.
ನಗರ, ಪಟ್ಟಣ, ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಬಂದಾಗಿನಿಂದ ಮುಸ್ಲಿಂ ಸಮುದಾಯ ಮೃತರ ಹೆಸರುಗಳನ್ನು ತಮ್ಮ ಮಸೀದಿ ಮೇಲೆ ಅನೌನ್ಸ್ ಮಾಡುವುದು ವಾಡಿಕೆ. ಆದರೆ, ಮುಸ್ಲಿಂ ಸಮುದಾಯ ತಮ್ಮ ಸಮುದಾಯಕ್ಕೆ ಮಾತ್ರ ಸಿಮೀತ ಆಗಿದ್ದರೆ, ಈ ವೈದ್ಯ ದಂಪತಿ ಜಾತಿ, ಮತ, ಪಂಥ ಬೇಧಭಾವ ಇಲ್ಲದೇ ಸಾವಿನ ಸುದ್ದಿ ನೀಡುತ್ತಿರುವುದು ವಿಶೇಷ. ಇದು ಈಗ ಬೈಲಹೊಂಗಲದಲ್ಲಿ ಮುಸ್ಲಿಮರಿಗೆ ಮಾದರಿ ಆಗಿದ್ದು, ಅವರು ಕೂಡ ಹಿಂದೂ ಸೇರಿ ಅನ್ಯ ಧರ್ಮೀಯರ ಸಾವಿನ ಸುದ್ದಿಗಳನ್ನು ತಮ್ಮ ಮಸೀದಿಯಲ್ಲಿ ಅನೌನ್ಸ್ ಮಾಡುವ ಮೂಲಕ ಕೋಮು ಸೌಹಾರ್ದತೆ ಮೆರೆಯುತ್ತಿದ್ದಾರೆ.
"ಜಾತಿ, ಮತ, ಧರ್ಮಗಳ ಬೇಧ ಇಲ್ಲದೇ, ನಮ್ಮೂರಲ್ಲಿ ಯಾರೇ ತೀರಿಕೊಂಡರೂ ಆ ಸುದ್ದಿಯನ್ನು ಡಾ.ಮಹಾಂತೇಶ ರಾಮಣ್ಣವರ ಮನೆ ಮೇಲೆ ಅನೌನ್ಸ್ ಮಾಡಿಸುತ್ತಾರೆ. ನಮ್ಮ ಮುಸ್ಲಿ ಸಮಾಜದವರು ಮೃತಪಟ್ಟರು ಅವರ ಹೆಸರನ್ನು ಬಿತ್ತರಿಸುತ್ತಾರೆ.
ಇದರಿಂದ ಬಹಳಷ್ಟು ಉಪಯೋಗ ಆಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ" ಎನ್ನುತ್ತಾರೆ ಗೃಹಿಣಿ ಜಬೀನಾ ಮೊಮಿನ್. ಯುವಕ ನಾಗರಾಜ ತಲ್ಲೂರ ಮಾತನಾಡಿ, "ಮೊದಲೆಲ್ಲಾ ನಾಲ್ಕೈದು ದಿನಗಳ ಬಳಿಕ ಯಾರಾದರು ಮೃತಪಟ್ಟರೆ ಗೊತ್ತಾಗುತ್ತಿತ್ತು. ಮೈಕ್ನಲ್ಲಿ ಅನೌನ್ಸ್ ಮಾಡುವಾಗಿಂದ ಬಹಳ ಬೇಗನೇ ವಿಷಯ ತಿಳಿಯುತ್ತಿದೆ. ಅಲ್ಲದೇ ಶ್ರದ್ಧಾಂಜಲಿ ವಾಟ್ಸ್‌ಆ್ಯಪ್ ಗ್ರೂಪ್ ಕೂಡ ತುಂಬಾ ಅನುಕೂಲ ಆಗಿದೆ.
ಮೃತಪಟ್ಟವರು ಮತ್ತು ದೇಹದಾನ ಮಾಡಿದವರ ಹೆಸರನ್ನು ಹೇಳಿ ಡಾ.ಸುರೇಖಾ ರಾಮಣ್ಣವರ ಮೇಡಂ ಅನೌನ್ಸ್ ಮಾಡುತ್ತಾರೆ. ಸುತ್ತಲಿನ ಐದಾರು ಕಿ.ಮೀ. ಅಂತರದ ಗ್ರಾಮಗಳಿಗೂ ಇದು ಕೇಳಿಸುತ್ತದೆ" ಎಂದು ಹೇಳಿದರು.
ಡಾ.ಮಹಾಂತೇಶ ಅವರು ಬೆಳಗ್ಗೆ 8ಕ್ಕೆ ಬೆಳಗಾವಿಗೆ ತೆರಳಿದರೆ, ವಾಪಸ್ಸು ಮನೆಗೆ ಬರುವುದು ಸಾಯಂಕಾಲ 6ಕ್ಕೆ. ಇನ್ನು ಪತ್ನಿ ದಿನವಿಡೀ ರೋಗಿಗಳ ಆರೈಕೆಯಲ್ಲೇ ತೊಡಗಿರುತ್ತಾರೆ. ಇದರ ಮಧ್ಯೆ ಒಂದೆರಡು ನಿಮಿಷ ಸಮಯ ವಾಟ್ಸ್ಆ್ಯಪ್ನಲ್ಲಿ ಮೃತರ ಕುರಿತು ವಾಯ್ಸ್ ಕೊಡುತ್ತಾರೆ.
ಅದನ್ನು ಅವರದ್ದೇ ಕಟ್ಟಡದಲ್ಲಿರುವ ಮೆಡಿಕಲ್ ಅಂಗಡಿಯ ಮಹಾಂತೇಶ ಹಿಟ್ಟಣಗಿ ಅವರು ಎಂಪ್ಲಿಪಾಯರ್ನಲ್ಲಿ ಪ್ಲೇ ಮಾಡುತ್ತಾರೆ. ಓಂ ನಮಃ ಶಿವಾಯದೊಂದಿಗೆ ಆರಂಭವಾಗಿ, ಮೃತರ ಪೂರ್ತಿ ಹೆಸರು, ವಯಸ್ಸು, ಊರು, ಗಲ್ಲಿ, ಅಂತ್ಯಕ್ರಿಯೆ ಸಮಯ ಮತ್ತು ಸ್ಥಳದ ಕುರಿತು ಮಾಹಿತಿ ನೀಡುತ್ತಾರೆ.
ಮೃತಪಟ್ಟ ಒಬ್ಬರ ಬಗ್ಗೆ ಮೂರು ಬಾರಿ ಅನೌನ್ಸ್ ಆಗುತ್ತದೆ. ಇದನ್ನು ಜನರು ಕಿವಿಗೊಟ್ಟು ಆಲಿಸುತ್ತಾರೆ. ಇದರಿಂದ ಊರಲ್ಲಿ ಮೃತಪಟ್ಟವರ ಸುದ್ದಿ ತಿಳಿಯಲು ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ತುಂಬಾ ಅನುಕೂಲ ಆಗಿದೆ.
ಇನ್ನಷ್ಟು ಓದಿರಿ:
ಬಿಹಾರದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗ ಪ್ರತಿಷ್ಠಾಪನೆ