ನಗರದ ರಾಜಕೀಯ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ, ಸಚಿವ ಜಮೀರ್ ವೈಯಕ್ತಿಕವಾಗಿ ₹25 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಈ ಕ್ರಮವು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಪ್ರಚಂಡ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಸಚಿವ ಜಮೀರ್ ಕ್ರಮವನ್ನು ಪ್ರಶಂಸಿಸಲಾಗಿದೆ.
ಕೆಲವರು ಈ ನಿರ್ಧಾರವನ್ನು ರಾಜಕೀಯ ಉದ್ದೇಶವೆಂದು ವಿಶ್ಲೇಷಿಸಿದ್ದರೂ, ಹೆಚ್ಚಿನ ಭಕ್ತರು ಮತ್ತು ಸ್ಥಳೀಯರು ಕುಟುಂಬದ ಹಿತಕ್ಕಾಗಿ ತೆಗೆದ ಕ್ರಮ ಎಂದು ಧನಾತ್ಮಕವಾಗಿ ಗಮನಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ವೈರಲ್ ಆಗಿದ್ದು, ಬಳಕೆ ಹೆಚ್ಚಾಗಿದೆ. ಶನಿವಾರ ಬಳ್ಳಾರಿಗೆ ಭೇಟಿ ನೀಡಿದ್ದ ಅವರು, ನೇರವಾಗಿ ಮೃತ ರಾಜಶೇಖರ್ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ತಮ್ಮ ವೈಯಕ್ತಿಕ ಖಾತೆಯಿಂದ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜಶೇಖರ್ ನಿಧನದಿಂದ ಅವರ ಕುಟುಂಬ ಆಧಾರಸ್ತಂಭವನ್ನೇ ಕಳೆದುಕೊಂಡಿದೆ. ತಂದೆ ಸಣ್ಣ ಹೋಟೆಲ್ ನಡೆಸುತ್ತಿದ್ದರೆ, ಮಗ ಆಸರೆಯಾಗಿದ್ದ. ಹಣದಿಂದ ಪ್ರಾಣ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನಾನು, ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಸೇರಿ ಈ ಸಹಾಯ ಮಾಡಿದ್ದೇವೆ. ಸ್ಲಂ ಬೋರ್ಡ್ ವತಿಯಿಂದ ಅವರಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಡುವ ಭರವಸೆ ಕೂಡ ನೀಡಿದ್ದೇನೆ.
ಪಕ್ಷದ ವತಿಯಿಂದಲೂ ಹೆಚ್ಚಿನ ನೆರವು ನೀಡಲಾಗುವುದು ಎಂದು ತಿಳಿಸಿದರು. ಬ್ಯಾನರ್ ವಿಚಾರದಲ್ಲಿ ನಡೆದ ಸಂಘರ್ಷದ ಕುರಿತು ಮಾತನಾಡಿದ ಸಚಿವರು, ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ವಾಲ್ಮೀಕಿ ಪುತ್ಥಳಿ ಅನಾವರಣ ನಮ್ಮೆಲ್ಲರ ಬಹಳ ದಿನಗಳ ಕನಸಾಗಿತ್ತು. ಬ್ಯಾನರ್ ಕಟ್ಟುವ ವಿಚಾರದಲ್ಲಿ ರೆಡ್ಡಿ ದೊಡ್ಡ ಮನಸ್ಸು ಮಾಡಬೇಕಿತ್ತು. ಅದನ್ನು ಬಿಟ್ಟು ಸಣ್ಣತನ ಪ್ರದರ್ಶಿಸಿದ್ದಾರೆ.
ಒಂದು ವೇಳೆ ಬ್ಯಾನರ್ ಬೇಡವೆಂದಿದ್ದರೆ ಶಾಸಕ ಭರತ್ ರೆಡ್ಡಿಗೆ ಫೋನ್ ಮಾಡಿ ಹೇಳಬಹುದಿತ್ತು. ಇಷ್ಟು ದೊಡ್ಡ ಮಟ್ಟದ ಗಲಾಟೆ ನಡೆಯುವ ಅಗತ್ಯವಿರಲಿಲ್ಲ' ಎಂದರು.ನಗರದಲ್ಲಿ ಎರಡು ದಿನಗಳ ಹಿಂದೆ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಕುಟುಂಬಕ್ಕೆ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ಮಾಡಿದ್ದಾರೆ. ಜೊತೆಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ.
ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅಮಾನತು ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹಮದ್ ಖಾನ್, ಅಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಲೋಪವಾದರೆ ಕ್ರಮ ಅನಿವಾರ್ಯ. ಆದರೆ, ಎಸ್ಪಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು. ಸದ್ಯ ಚಿತ್ರದುರ್ಗದ ಎಸ್ಪಿ ಅವರು ಬಳ್ಳಾರಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತನಿಖೆ ಮುಂದುವರಿಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಹೆಚ್ ಎಂ ರೇವಣ್ಣ ಮಾತನಾಡಿ, ಇದು ಉದ್ದೇಶಪೂರ್ವಕವಾಗಿ ಮಾಡಲಾದ ಗಲಾಟೆ. ಬಹಳ ವಿಜೃಂಭಣೆಯಿಂದ ವಾಲ್ಮೀಕಿ ಪುತ್ಥಳಿ ಕಾರ್ಯಕ್ರಮ ನಡೆಯಬೇಕಿತ್ತು. ಬಿಜೆಪಿ ಹೊಟ್ಟೆ ಉರಿಯಾಗಿ ಕ್ರಿಯೇಟ್ ಮಾಡಿದ್ದಾರೆ. ಈ ಹಿಂದೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ರು. ಈಗಾಗಲೇ ಜನರು ಅವರಿಗೆ ತೀರ್ಪು ಕೊಟ್ಟಿದ್ದಾರೆ. ನಮ್ಮ ಸಮಿತಿ ಈಗಾಗಲೇ ವಿಡಿಯೋ ಸೇರಿ ಅನೇಕ ಮಾಹಿತಿಯನ್ನು ಕಲೆಕ್ಟ್ ಮಾಡಿದೆ. ಈ ಕುಟುಂಬಕ್ಕೆ ಪರಿಹಾರ, ಮನೆ ಸೇರಿದಂತೆ ಪಕ್ಷ ನೀಡಲಿದೆ.
ಈ ರೀತಿ ಘಟನೆ ಬಹಳ ದುಃಖಕರ. ಆಮಾಯಕರ ಸಾವು ಬಹಳ ನೋವು ತರಿಸಿದೆ. ಪಕ್ಷದ ನಾಯಕರು, ಸಾರ್ವಜನಿಕ, ಪ್ರತ್ಯಕ್ಷದರ್ಶಿಗಳು, ಅಧಿಕಾರಿಗಳು ಸೇರಿದಂತೆ ಅನೇಕರಿಂದ ಮಾಹಿತಿ ಪಡೆದಿದ್ದೇವೆ. ಮೂರು ದಿನಗಳಲ್ಲಿ ಕೆಪಿಸಿಸಿಗೆ ವರದಿ ಕೊಡುತ್ತೇವೆ. ಎಫ್ಎಸ್ಎಲ್ ರಿಪೋರ್ಟ್ ಬಂದ ತಕ್ಷಣ ಸರ್ಕಾರ, ಪಾರ್ಟಿಗೂ ಈ ವರದಿಯನ್ನು ಕೊಡುತ್ತೇವೆ ಎಂದು ತಿಳಿಸಿದರು. ಮೃತ ರಾಜಶೇಖರ್ ರೆಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಜಯಪ್ರಕಾಶ್ ಹೆಗಡೆ, ಒಂದು ಬ್ಯಾನರ್ ವಿಚಾರಕ್ಕೆ ಗಲಾಟೆ ಆಗಿದೆ. ಈ ವೇಳೆ ಪಕ್ಷದ ಕಾರ್ಯಕರ್ತ ಮೃತಪಟ್ಟಿದ್ದು ನೋವು ತಂದಿದೆ. ವರದಿ ರೆಡಿ ಮಾಡಿ ಕೆಪಿಸಿಸಿಗೆ ಕೊಡುತ್ತೇವೆ.
ಬ್ಯಾನರ್'ಗೆ ಏಕೆ ವಿರೋಧ ಮಾಡಿದ್ದಾರೆ ಗೊತ್ತಿಲ್ಲ. ಬಿಜೆಪಿಯವ್ರು ನಂದೇ ನಡೆಯುತ್ತದೆ ಅಂತ ಅಂದುಕೊಡಿರಬಹುದು. ರಾಜಶೇಖರ ಕುಟುಂಬಸ್ಥರು ನೌಕರಿ ಕೇಳಿದ್ದಾರೆ. ಅದನ್ನು ಕೊಡಲು ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ ಎಂದರು.
ಘಟನೆ ಕುರಿತು ಇದಕ್ಕೂ ಮುನ್ನ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಮಾಜಿ ಸಚಿವರಾದ ಬಿ ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಂಬಂತೆ ಗಲಭೆಗೆ ಕಾರಣರಾದವರನ್ನು ಬಂಧಿಸುವ ಬದಲು ಎಸ್ಪಿಯವರನ್ನು ಅಮಾನತು ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಪವನ್ ನುಜ್ಜೂರು ಅಧಿಕಾರ ಸ್ವೀಕಾರ ಮಾಡಿ 12 ತಾಸು ಅಗಿತ್ತು ಅಷ್ಟೇ. ರಾಜ್ಯ ಸರ್ಕಾರ ಕಣ್ಣೊರೆಸೋ ತಂತ್ರ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಸಿದ್ದರಾಮಯ್ಯನವರ ಬಗ್ಗೆ ಗೌರವ ಇದೆ. ಆದರೆ, ಈಗ ಮಾಡಿರೋದು ಸರಿಯೇ? ಎಂದು ಪ್ರಶ್ನಿಸಿದ್ದರು.
ಬಳ್ಳಾರಿಯನ್ನು ಡಿಜೆ ಹಳ್ಳಿ ಕೆಜಿ ಹಳ್ಳಿ ಮಾಡಲಿಕ್ಕೆ ಹೊರಟಿದ್ದಾರೆ ಎಂಬ ಜನಾರ್ದನ್ ರೆಡ್ಡಿ ಹೇಳಿಕೆ ವಿಚಾರ ಕುರಿತು ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ನಾನು ಬಳ್ಳಾರಿ ಶಾಂತಯುತವಾಗಿರಬೇಕು ಅಂತಾ ಕೋರಿಕೊಳ್ಳುವವನು. ಬಳ್ಳಾರಿ ಶಾಂತಯುತವಾಗಿರುತ್ತೆ, ಯಾರು ಭಯಪಡುವ ಅಗತ್ಯವಿಲ್ಲ. ಸಿಎಂ ಸಾಹೇಬ್ರು ನಿನ್ನೆ ನನ್ನ ಹತ್ರ ಮಾತಾಡಿದ್ದಾರೆ. ಯಾರು ನನ್ನ ಮೇಲೆ ಸಿಟ್ಟು ಆಗಿಲ್ಲ. ಸತ್ಯಶೋಧನಾ ನಿಯೋಗದ ಮುಂದೆ ಹೇಳಿಕೆ ನೀಡಿರುವೆ. ನಾನು ಏನು ತಪ್ಪು ಮಾಡಿಲ್ಲ ಎಂದು ಹೇಳಿದರು.
ಇನ್ನಷ್ಟು ಓದಿರಿ:
ಅಗಲಿದ ಟಗರಿಗೆ ಸ್ಮಾರಕ ಸಮಾಧಿ : ನಿತ್ಯ ಪೂಜೆ-ಪುನಸ್ಕಾರ