ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ (Temple) ವೈಕುಂಠ ಏಕಾದಶಿ ಸಂಭ್ರಮ ಮೇಳೈಸಿದೆ. ಕಳೆದ ಎಂಟು ವರ್ಷಗಳಿಂದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ವೈಕುಂಠ ಏಕಾದಶಿ (Vaikuntha Ekadashi) ನಗರವಾಸಿಗಳ ಹಾಗೂ ವಿಷ್ಣು ಭಕ್ತರ (Devotees) ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರತೀ ವರ್ಷ ವಿನೂತನ ಪ್ರಯೋಗಗಳ ಮೂಲಕ ಅಲಂಕಾರ ಮಾಡುವ ಸ್ವಯಂ ಸೇವಕರ ಸಮಿತಿ ಈ ಬಾರಿ ತಿರುಪತಿ ವೆಂಕಟರಮಣ ನ ಸನ್ನಿಧಾನವನ್ನೇ ನೆನಪಿಸುವಂತೆ ಹೂವುಗಳ ಅಲಂಕಾರ ಮಾಡಿದೆ.
ವೆಂಕಟರಮಣನ ವಿಶ್ವರೂಪ ದರ್ಶನದ ಪ್ರತಿಕೃತಿಯನ್ನು ಮಾಡಲಾಗಿದೆ.ದೇವಳದ ಸ್ವಯಂಸೇವಕರ ತಂಡವೇ ಈ ಕೆಲಸಗಳನ್ನು ಮಾಡಿದ್ದು ,ನಿರಂತರವಾಗಿ ಶ್ರಮ ವಹಿಸಿದೆ. ಏಕಾದಶಿ ವಿಷ್ಣುವಿಗೆ ಭಾರೀ ಪ್ರೀಯವಾದ ದಿನವಾಗಿದ್ದು, ವರ್ಷಕ್ಕೆ ಬರುವ 12 ಏಕಾದಶಿಗಳಲ್ಲಿ ವೈಕುಂಠ ಏಕಾದಶಿಗೆ ಭಾರೀ ಮಹತ್ವವಿದೆ.
ದೇಗುಲದ ರಥಬೀದಿ ವೈವಿಧ್ಯ ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿದೆ. ಮುಖ್ಯದ್ಚಾರದಲ್ಲೇ ವೆಂಕಟರಮಣನ ಸೊಬಗನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.ದೇವಳದ ವೈಕುಂಠ ದ್ವಾರ ಪ್ರವೇಶಿಸುತ್ತಿದ್ದಂತೆಯೇ ನವ ವೈವಿಧ್ಯ ಹೂವುಗಳೊಂದಿಗೆ ಸುತ್ತುಪೌಳಿಯನ್ನು ಅಲಂಕರಿಸಲಾಗಿದೆ.
ದೇವಸ್ಥಾನದ ಒಳಭಾಗದಲ್ಲಿ ಭೂಮಂಡಲ ಬೆಳಕಿನ ಚಿತ್ತಾರ ಮಾಡಲಾಗಿದೆ. ಗರ್ಭಗುಡಿಯ ಸುತ್ತ ಮೇಲ್ಭಾಗದಲ್ಲಿ ವಿವಿಧ ಗ್ರಹಗಳು, ನಕ್ಷತ್ರಪುಂಜಗಳನ್ನು ಬೆಳಕಿನಿಂದ ನಿರ್ಮಿಸಲಾಗಿದೆ. ಈ ಉಪಕರಣವನ್ನು ಚೀನಾದಿಂದ ತರಿಸಲಾಗಿದೆ.
ಈ ಸೊಬಗು ಭಕ್ತರ ಕಣ್ಮನವನ್ನು ತುಂಬಿಸಿದೆ. ಧ್ವಜಸ್ತಂಭದ ಸುತ್ತ ಬಣ್ಣ ಬಣ್ಣದ ಹೂವುಗಳು,ಸುತ್ತಲೂ ಗಾರ್ಡನ್ ಮಾದರಿ ನಾನಾ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಮುಂಭಾಗ ಎರಡು ಕೃತಕ ಫಾಲ್ಸ್ ಗಳ ನಿರ್ಮಾಣ ಮಾಡಲಾಗಿದೆ. ಪ್ರಾಂಗಣದಲ್ಲಿ ವಿಷ್ಣುವಿನ ನಾನಾ ಅವಾತಾರಗಳ ರಂಗೋಲಿಯನ್ನು ಬಿಡಿಸಲಾಗಿದೆ.
ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ ವರ್ಷ ತರಕಾರಿ ಗಿಡಗಳನ್ನು ಭಕ್ತರಿಗೆ ನೀಡಲಾಗಿತ್ತು.ಈ ಬಾರಿ ತುಳಸಿ ಗಿಡವನ್ನು ವಿತರಣೆ ಮಾಡಲಾಗಿದೆ.25 ಸಾವಿರಕ್ಕೂ ಅಧಿಕ ತುಳಸಿ ಗಿಡಗಳನ್ನು ವಿತರಣೆ ಮಾಡಲಾಗಿದೆ.ತುಳಸಿ ಗಿಡದಲ್ಲಿ ಉತ್ತಮ ವಾದ ಅಕ್ಸಿಜನ್ ಸಿಗಲಿದ್ದು,ಇದನ್ನು ಮನೆಯ ಸುತ್ತಾ ನೆಟ್ಟು ಆರೋಗ್ಯವಙತ ಸಮಾಜ ನಿರ್ಮಿಸುವ ಉದ್ದೇಶದಿಂದ ತುಳಸಿ ಗಿಡವನ್ನು ಹಂಚಲಾಗಿದೆ..ಕ್ಷೇತ್ರದಲ್ಲಿ ನಾಮತ್ರಯ ಮಹಾಮಂತ್ರ ಜಪಯಜ್ಞ,ಪುಷ್ಪ ಯಾಗ ಹಾಗೂ ಅಷ್ಟಾವಧಾನ ಸೇವೆ ನಡೆದಿದೆ ಎಂದು ಭಕ್ತಾದಿಗಳು ತಿಳಿಸಿದ್ದಾರೆ.