ದೇಶ ಸುತ್ತು ಕೋಶ ಓದು ಎಂಬ ಮಾತಿದೆ. ಇಲ್ಲೊಬ್ಬ ವ್ಯಕ್ತಿ ತನ್ನ 67ರ ಹರೆಯದರಲ್ಲಿ 10 ದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಇನ್ನೂ ಹಲವು ದೇಶಗಳಿಗೆ ಭೇಟಿ ನೀಡುವ ಇರಾದೆ ಹೊಂದಿದ್ದಾರೆ.
ಹೌದು. ಕಣ್ಣೂರಿನ ಜವಾಹರ್ ಮುನ್ಸಿಪಲ್ ಕ್ರೀಡಾಂಗಣದ ಮುಂದೆ ಕಬ್ಬಿನ ಜ್ಯೂಸ್ ಮಾರಾಟ ಮಾಡುವ ಪಪ್ಪಿನಿಸೇರಿಯ ವಿ.ಪಿ. ಹಾಶಿಮ್ ಅವರು ತಮ್ಮ ಖುಷಿಗಾಗಿ ವಿಶ್ವಪರ್ಯಟನೆ ಆರಂಭಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ ಅವರು 10 ರಾಷ್ಟ್ರಗಳು ಮತ್ತು ಭಾರತದ ಹಲವು ಭಾಗಗಳನ್ನು ಸುತ್ತಾಡಿ ಬಂದಿದ್ದಾರೆ.
ಯಾವೆಲ್ಲಾ ರಾಷ್ಟ್ರಗಳಿಗೆ ಭೇಟಿ? 67 ವರ್ಷದ ಹಾಶಿಮ್ ಅವರು, ಕಳೆದ 13 ವರ್ಷಗಳಲ್ಲಿ 10 ರಾಷ್ಟ್ರಗಳ ಪರ್ಯಟನೆ ಮಾಡಿದ್ದಾರೆ. ಇಸ್ರೇಲ್, ಪ್ಯಾಲೆಸ್ಟೈನ್, ಜೋರ್ಡಾನ್, ಈಜಿಪ್ಟ್, ಇರಾಕ್, ಮಲೇಷ್ಯಾ, ಥೈಲ್ಯಾಂಡ್, ಅಜರ್ಬೈಜಾನ್, ಟರ್ಕಿ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದಾರೆ. ಪ್ರಯಾಣದ ಮೇಲಿನ ಉತ್ಸಾಹವನ್ನು ಜೀವಮಾನದ ಅನ್ವೇಷಣೆಯನ್ನಾಗಿ ಪರಿವರ್ತಿಸಿದ್ದಾರೆ.
"ನಾನು ಈವರೆಗೂ ಇಸ್ರೇಲ್, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿ 10 ರಾಷ್ಟ್ರಗಳಿಗೆ ಭೇಟಿ ನೀಡಿದ್ದೇನೆ. ಕೊನೆಯ ಬಾರಿಗೆ ಟರ್ಕಿಗೆ ಪ್ರಯಾಣಿಸಿದ್ದೆ. ಆ ರಾಷ್ಟ್ರ ಸುಂದರವಾಗಿದೆ. 3 ತಿಂಗಳ ನಂತರ, ಚೀನಾಕ್ಕೆ ಪತ್ನಿ ಮತ್ತು ಅಣ್ಣನ ಜೊತೆ ಪ್ರಯಾಣಿಸಲು ಯೋಜಿಸುತ್ತಿದ್ದೇನೆ" ಎಂದು ಹಾಶಿಮ್ ತಿಳಿಸಿದ್ದಾರೆ.
ಊರು ಸುತ್ತಲು ಕಬ್ಬೇ ಆಧಾರ: ಕಬ್ಬಿನ ಜ್ಯೂಸ್ ಮಾರಾಟದಿಂದ ಬರುವ ಹಣವನ್ನು ಉಳಿತಾಯ ಮಾಡಿ, ಅದನ್ನು ವಿದೇಶಗಳಿಗೆ ಸುತ್ತಾಡಲು ಬಳಸುತ್ತೇನೆ. ಯಾವುದೇ ದೇಶಕ್ಕೆ ಭೇಟಿ ನೀಡಿದಾಗಲೂ ನನ್ನ ಜೊತೆ ಪತ್ನಿ ಹಸೀನಾ ಇರುತ್ತಾರೆ. ಮೊದಲ ವಿದೇಶ ಪ್ರಯಾಣದ ಅನುಭವವು ಹೆಚ್ಚಿನ ಸಾಹಸಗಳಿಗೆ ಇಂಬು ನೀಡಿತು. ಭಾರತದ ಹಲವು ಪ್ರದೇಶಗಳಿಗೂ ಭೇಟಿ ನೀಡಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಜೂನ್ ಮತ್ತು ಜುಲೈ ತಿಂಗಳಲ್ಲಿ ಕಬ್ಬಿನ ವ್ಯಾಪಾರ ಇರುವುದಿಲ್ಲ. ಈ ವೇಳೆ ಮನೆಯಲ್ಲಿದ್ದಾಗ, ತನ್ನ ಅಣ್ಣನ ಜೊತೆ ಸಂವಹನ ನಡೆಸುತ್ತಿದ್ದಾಗ ವಿದೇಶ ಪರ್ಯಟನೆ ಬಗ್ಗೆ ಆತ ತಿಳಿಸಿದ. ಆತ ಪ್ರಯಾಣದ ಮಹತ್ವ ಮತ್ತು ಅದು ನೀಡುವ ಅನುಭವಗಳ ಬಗ್ಗೆ ಹೇಳಿದ. ಆತನ ಮಾತು ಕೇಳಿದ ಬಳಿಕ ನನ್ನಲ್ಲಿ ವಿಶ್ವ ಸುತ್ತುವ ಆಸೆ ಚಿಗುರೊಡೆಯಿತು. ಸಾಧ್ಯವಾದಾಗಲೆಲ್ಲಾ ಹೊಸ ಸ್ಥಳಗಳಿಗೆ ಭೇಟಿ ನೀಡಲು ಮುಂದುವರಿಸುತ್ತೇನೆ" ಎಂದು ಹಾಶಿಮ್ ಹೇಳಿದರು.
ಒಂದೆರಡು ದೇಶಗಳಿಗೆ ಪ್ರಯಾಣಿಸುವ ಸಣ್ಣ ಆಸೆಯೊಂದಿಗೆ ಆರಂಭವಾದ ಈ ಪ್ರಯಾಣ ಈಗ ದೊಡ್ಡ ಕನಸಾಗಿದೆ. ಇನ್ನಷ್ಟು ದೇಶಗಳಿಗೆ ಭೇಟಿ ನೀಡುವ ಇರಾದೆಯನ್ನು ಹಾಶಿಮ್ ಹೊಂದಿದ್ದಾರೆ. ಮುಂದಿನ ಸಲ ನೆರೆರಾಷ್ಟ್ರ ಚೀನಾಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.
ಮಾರೋದು ಜ್ಯೂಸ್, ತಿರುಗೋದು ವಿಶ್ವ: ಜೀವನೋಪಾಯಕ್ಕಾಗಿ ಹಾಶಿಮ್ ಅವರು ಕಣ್ಣೂರಿನ ಕ್ರೀಡಾಂಗಣದ ಮುಂದೆ ಕಬ್ಬಿನ ಜ್ಯೂಸ್ ಮಾರಾಟ ಆರಂಭಿಸಿದರು. ಕಳೆದ 30 ವರ್ಷಗಳಿಂದ ಅವರು ಇದೇ ಕೆಲಸವನ್ನು ಮಾಡುತ್ತಿದ್ದಾರೆ. ದೊಡ್ಡ ಲಾಭವಲ್ಲದಿದ್ದರೂ, ಜೀವನ ನಡೆಸಲು ಈ ಕೆಲಸ ನೆರವಾಗಿದೆ.
ಇನ್ನಷ್ಟು ಓದಿರಿ:
ತಾನೇ ವೆನೆಜುವೆಲಾ ಹಂಗಾಮಿ ಅಧ್ಯಕ್ಷ : ಡೊನಾಲ್ಡ್ ಟ್ರಂಪ್ ಘೋಷಣೆ `