ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಫ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಗ್ರೋಕ್ ಎಐ ಬಳಸಿಕೊಂಡು ಅಶ್ಲೀಲ ಕಂಟೆಂಟ್ಗಳನ್ನು ಸೃಷ್ಟಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಇದರ ವಿರುದ್ಧ ಭಾರತ ಸರ್ಕಾರ ಕ್ರಮಕ್ಕೆ ಸೂಚಿಸಿದೆ. ಇದರ ಬೆನ್ನಲ್ಲೇ, ತನ್ನ ತಪ್ಪು ಒಪ್ಪಿಕೊಂಡಿರುವ ಎಕ್ಸ್ ಸಂಸ್ಥೆಯು ಭಾರತೀಯ ಕಾನೂನಿಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದೆ.ಸರ್ಕಾರದ ಸೂಚನೆ ಬಳಿಕ ಭಾರತದಲ್ಲಿ 3,500 ಎಕ್ಸ್ ಖಾತೆಗಳಲ್ಲಿನ ವಿಡಿಯೋಗಳನ್ನು ಬ್ಲಾಕ್ ಮಾಡಿದೆ. ಪೋಸ್ಟ್ಗಳನ್ನು ಹೊಂದಿರುವ 600ಕ್ಕೂ ಹೆಚ್ಚು ಅಶ್ಲೀಲ ಖಾತೆಗಳನ್ನು ಡಿಲೀಟ್ ಮಾಡಲಾಗಿದೆ. ಇನ್ನು ಮುಂದೆ ಗ್ರೋಕ್ ಎಐ ಬಳಸಿ ಅಶ್ಲೀಲ ಕಂಟೆಂಟ್ ರಚಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದ್ದಾಗಿ ಸರ್ಕಾರದ ಮೂಲವೊಂದು ಮಾಹಿತಿ ನೀಡಿದೆ.ಗ್ರೋಕ್ ಎಐ ಬಳಸಿ ಅಶ್ಲೀಲ ಕಂಟೆಂಟ್ ರಚನೆ:ಇದರ ದುರ್ಲಾಭ ಪಡೆಯುತ್ತಿರುವ ಬಳಕೆದಾರರು ಎಐ ಬಳಸಿ ಕೆಟ್ಟ ಕಂಟೆಂಟ್ಗಳನ್ನು ಸೃಷ್ಟಿಸುತ್ತಿದ್ದಾರೆ. ಗ್ರೋಕ್ ಎಐಗೆ ಕಮ್ಯಾಂಡ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ಫೋಟೋವನ್ನು ನಗ್ನಗೊಳಿಸುವ, ವಿಡಿಯೋ ತಯಾರಿಸುವ ಅಥವಾ ಅವರ ಬಗ್ಗೆ ಮಾಹಿತಿಯನ್ನು ಹೆಕ್ಕಿ ತೆಗೆಯುವ ಮೂಲಕ ಖಾಸಗಿತನಕ್ಕೆ ಧಕ್ಕೆ ಉಂಟುಮಾಡುವ ಪ್ರಕರಣಗಳು ಹೆಚ್ಚುತ್ತಿವೆ.ಗ್ರೋಕ್ ಎಂಬುದು ಎಐ ಚಾಟ್ಬೋಟ್ ಅಪ್ಲಿಕೇಶನ್. ಇದನ್ನು 2023 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗ್ರೋಕ್ ಇಮ್ಯಾಜಿನ್ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿದೆ. ಇದನ್ನು ಬಳಸಿ ವಯಸ್ಕರ ಅಥವಾ ಅಶ್ಲೀಲ ಕಂಟೆಂಟ್ ರಚಿಸಲಾಗುತ್ತಿದೆ. ಪೇಯ್ಡ್ ಗ್ರಾಹಕರಿಗೆ ಈ ಫೀಚರ್ ಬಳಕೆಗೆ ಲಭ್ಯವಿದೆ. ಎಕ್ಸ್ ಖಾತೆದಾರರು ಈ ಚಾಟ್ಬೋಟ್ ಅನ್ನು ಉಚಿತವಾಗಿ ಬಳಸಬಹುದಾಗಿದೆ.ಎಕ್ಸ್‌ಗೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ:ಗ್ರೋಕ್ ಎಐ ಬಳಸಿ ಎಕ್ಸ್ನಲ್ಲಿ ಅಶ್ಲೀಲ, ನಗ್ನ, ಅಸಭ್ಯ ಕಂಟೆಂಟ್ಗಳ ರಚನೆ, ಪ್ರಕಟಣೆ ಅಥವಾ ಪ್ರಸಾರ, ಹಂಚಿಕೆ ಅಥವಾ ಅಪ್‌ಲೋಡ್ ಮಾಡುವುದನ್ನು 72 ಗಂಟೆಗಳಲ್ಲಿ ನಿರ್ಬಂಧಿಸಬೇಕು. ಇಲ್ಲವಾದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ಕಾನೂನುಗಳ ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿತ್ತು.ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಆಗುತ್ತಿರುವ ಅನಾಚಾರವನ್ನು ತಡೆಯಲು ಸೂಚಿಸಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜನವರಿ 2 ರಂದು ಎಕ್ಸ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು. ಗ್ರೋಕ್ ಎಐ ದುರ್ಬಳಕೆಯನ್ನು ನಿಯಂತ್ರಿಸಲು ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಎಕ್ಸ್ ಸರ್ಕಾರಕ್ಕೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಿದೆ.ಗ್ರೋಕ್ ವಿರುದ್ಧ ಹೆಚ್ಚಿದ ಚಕಾರ: ಭಾರತ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳು ಗ್ರೋಕ್ ಎಐ ವಿರುದ್ಧ ಚಕಾರ ಎತ್ತಿವೆ. ಇಂಡೋನೇಷ್ಯಾ ಈ ಎಐ ಅನ್ನು ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳಲ್ಲಿ ಗ್ರೋಕ್ ವಿರುದ್ಧ ತನಿಖೆಗೆ ಆದೇಶ ಮಾಡಲಾಗಿದೆ. ಅಮೆರಿಕದ ಮೂವರು ಸಂಸದರು ಈ ಎಐ ಅನ್ನು ಆ್ಯಪ್ ಸ್ಟೋರ್ ಮತ್ತು ಪ್ಲೇಸ್ಟೋರ್ಗಳಿಂದ ತೆಗೆದು ಹಾಕುವಂತೆ ಆ್ಯಪಲ್ ಮತ್ತು ಗೂಗಲ್ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಓದಿರಿ:
ಅಥಣಿ ತಾಲೂಕಿನ ರೈತರ ಸಮಸ್ಯೆಗಳ ಪರಿಹಾರ ಮತ್ತು ಯೋಜನೆಗಳ ಮಂಜೂರಾತಿ